ಮುಂಬೈ: ಎರಡು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕೊನೆಗೂ ಮರಿ ತೆಂಡೂಲ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ಗೆ ಪ್ಲೇಯಿಂಗ್ XI ಸ್ಥಾನ ಲಭಿಸಿತು. ಇದರಿಂದ ಸಂತೋಷಗೊಂಡ ಕ್ರಿಕೆಟ್ ದೇವರು, ತಮ್ಮ ಪುತ್ರನ ಕ್ರಿಕೆಟ್ ಜೀವನಕ್ಕೆ ಶುಭ ಹಾರೈಸಿದ್ದಾರೆ.
2021ರ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ.ಗಳಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದ ಮರಿ ತೆಂಡೂಲ್ಕರ್ಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿರಲಿಲ್ಲ. 2022 ರಲ್ಲೂ 30 ಲಕ್ಷ ನೀಡಿ ತಂಡದಲ್ಲಿ ಉಳಿಸಿಕೊಂಡರೂ ಅವಕಾಶ ಸಿಗದೆ ಬೆಂಚ್ ಕಾದಿದ್ದ ಎಡಗೈ ವೇಗಿಗೆ, ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕೆಕೆಆರ್ ವಿರುದ್ಧ ಪಂದ್ಯದಲ್ಲಿಆಡುವ ಅವಕಾಶ ಲಭಿಸಿತು. 5 ಬಾರಿ ಚಾಂಪಿಯನ್ಸ್ ನಾಯಕ ರೋಹಿತ್ ಶರ್ಮಾ , ಅರ್ಜುನ್ ತೆಂಡೂಲ್ಕರ್ಗೆ ಕ್ಯಾಪ್ ನೀಡಿದರು. ಈ ಕ್ಷಣಕ್ಕೆ ಸಚಿನ್ ತೆಂಡೂಲ್ಕರ್ ಹಾಗೂ ಕುಟುಂಬದವರು ಸಾಕ್ಷಿಯಾದರು.
ಪವರ್ಪ್ಲೇನಲ್ಲಿ ಮರಿ ತೆಂಡೂಲ್ಕರ್ 2 ಓವರ್ ಬೌಲ್ ಮಾಡಿ 17 ರನ್ ನೀಡಿ ಗಮನ ಸೆಳೆದರು. ಆದರೆ, ದ್ವಿತೀಯನಲ್ಲಿ ಬ್ಯಾಟಿಂಗ್ಗೆ ಅವಕಾಶ ಸಿಗಲಿಲ್ಲ. ಈ ಪಂದ್ಯವನ್ನು ಮುಂಬೈ ಇಂಡಿಯನ್ಸ್ 5 ವಿಕೆಟ್ನಿಂದ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಅರ್ಜುನ್ ತೆಂಡೂಲ್ಕರ್ ಅವರ ಐಪಿಎಲ್ ವೃತ್ತಿ ಜೀವನ ಶುಭಾರಂಭವಾಯಿತು.
ಇದರ ನಡುವೆ ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪುತ್ರ ಅರ್ಜುನ್ ತೆಂಡೂಲ್ಕರ್ಗೆ ಭಾವನಾತ್ಮಕ ಸಂದೇಶ ಕಳುಹಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
“ಅರ್ಜುನ್ ಇಂದು ನಿಮ್ಮ ಕ್ರಿಕೆಟ್ ಜೀವನದಲ್ಲಿ ಮತ್ತೊಂದು ಮಹತ್ತರವಾದ ಹೆಜ್ಜೆಯನ್ನು ಇಟ್ಟಿದ್ದೀರಿ. ನಿನ್ನ ತಂದೆಯಾಗಿ ನಿನ್ನನ್ನು ತುಂಬಾ ಪ್ರೀತಿಸುವ ಮತ್ತು ಕ್ರಿಕೆಟ್ ರಂಗದ ಬಗ್ಗೆ ಭಾವನಾತ್ಮಕತೆ ಹೊಂದಿರುವ ನನಗೆ, ನೀವು ಈ ಆಟವನ್ನು ತುಂಬಾ ಗೌರವಿಸುತ್ತೀರಿ ಹಾಗೂ ಉತ್ತಮ ಪ್ರದರ್ಶನ ತೋರುತ್ತೀರಿ ಎಂಬ ನಂಬಿಕೆ ನನಗೆ ಇದೆ. ಇದನ್ನು ನೀವು ಪಾಲಿಸಿದರೆ, ಕ್ರಿಕೆಟ್ ನಿಮ್ಮನ್ನು ಪ್ರೀತಿಸುತ್ತದೆ,” ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
“ನೀವು ಈ ಹಂತ ತಲುಪಲು ಸಾಕಷ್ಟು ಪರಿಶ್ರಮ ಪಟ್ಟಿದ್ದೀರಿ, ಇನ್ನು ಮುಂದೆಯೂ ಇದೇ ರೀತಿಯ ಶ್ರಮ ವಹಿಸುತ್ತೀರಿ ಎಂಬುದು ನನಗೆ ತಿಳಿದಿದೆ. ಕ್ರಿಕೆಟ್ ಎಂಬ ಸುಂದರ ಜೀವನದಲ್ಲಿ ಪಯಣ ಆರಂಭಿಸಿರುವ ನಿನಗೆ ಒಳ್ಳೆಯದಾಗಲಿ, ಆಲ್ ದಿ ಬೆಸ್ಟ್,” ಎಂದು ಸಚಿನ್ ತೆಂಡೂಲ್ಕರ್ ತಮ್ಮ ಮಗನಿಗೆ ಶುಭ ಹಾರೈಸಿದ್ದಾರೆ.