ಆ್ಯಪಲ್ ಕಂಪನಿಯ ವಸ್ತುಗಳನ್ನು ಬಳಸುವುದು ಎಂದರೆ ಸಾಕಷ್ಟು ಮಂದಿಗೆ ಅಚ್ಚು ಮೆಚ್ಚು. ಅದರಲ್ಲೂ ಸೆಲೆಬ್ರಿಟಿಗಳು ಬಹುತೇಕಾ ಮಂದಿ ದುಬಾರಿ ಬೆಲೆಯ ಆ್ಯಪಲ್ ಕಂಪನಿಯ ಐಫೋನ್, ಐಪ್ಯಾಡ್ ಬಳಸುತ್ತಾರೆ. ಅಮೆರಿಕದ ಈ ಶ್ರೀಮಂತ ಕಂಪನಿಯ ವಿರುದ್ಧ ಈಗ ಅನೇಕ ಸೆಲೆಬ್ರಿಟಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಆ್ಯಪಲ್ ಐಪ್ಯಾಡ್ ವಿರುದ್ಧ ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಗರಂ ಆಗಿದ್ದಾರೆ. ಆ್ಯಪಲ್ ಕಂಪನಿಯ ಒಂದು ಹೊಸ ಜಾಹೀರಾತನ್ನು ಅವರು ಖಾರವಾಗಿ ಖಂಡಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಆ್ಯಪಲ್ ಕಂಪನಿಯು ತಮ್ಮ ಹೊಸ ಐಪ್ಯಾಡ್ನ ಜಾಹೀರಾತನ್ನು ಬಿಡುಗಡೆ ಮಾಡಿದೆ. ‘ಐಪ್ಯಾಡ್ ಪ್ರೋ’ ಎಷ್ಟು ಪವರ್ಫುಲ್ ಆಗಿದೆ ಎಂಬುದನ್ನು ತಿಳಿಸುವ ಸಲುವಾಗಿ ಈ ಜಾಹೀರಾತನ್ನು ಸಿದ್ಧಪಡಿಸಲಾಗಿದೆ. ಪುಸ್ತಕಗಳು, ಸಂಗೀತ ಸಾಧನಗಳು, ಟಿವಿ, ಗ್ರಾಮೋಫೋನ್, ಗೊಂಬೆ, ಪೇಂಟಿಂಗ್ಸ್, ಕಲಾಕೃತಿಗಳು, ಸ್ಪೀಕರ್, ಕ್ಯಾಮೆರಾ ಮುಂತಾದ ವಸ್ತುಗಳನ್ನು ದೊಡ್ಡ ಕ್ರಶರ್ ಮೂಲಕ ನಾಶಪಡಿಸುವ ದೃಶ್ಯ ಇದರಲ್ಲಿ ಇದೆ. ಆ ಎಲ್ಲ ಸಾಧನಗಳ ಕೆಲಸವನ್ನು ಕೇವಲ ಒಂದು ಐಪ್ಯಾಡ್ ಮಾಡುತ್ತದೆ ಎಂಬುದನ್ನು ಗ್ರಾಹಕರಿಗೆ ತಿಳಿಸುವುದು ಈ ಜಾಹೀರಾತಿನ ಉದ್ದೇಶವಾಗಿದೆ.
ಈ ಜಾಹೀರಾತನ್ನು ನೋಡಿದ ಅನೇಕ ಸೆಲೆಬ್ರಿಟಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಜಾಹೀರಾತಿನಿಂದ ಸಿನಿಮಾ, ಸಂಗೀತ, ಚಿತ್ರಕಲೆ, ಬರವಣಿಗೆ ಮುಂತಾದ ವಿಷಯಗಳಿಗೆ ಅವಮಾನ ಮಾಡಲಾಗಿದೆ ಎಂದು ಹಾಲಿವುಡ್ನ ಸೆಲೆಬ್ರಿಟಿಗಳು ಕೂಡ ಅಭಿಪ್ರಾಯ ತಿಳಿಸಿದ್ದಾರೆ. ಇದೀಗ ನಟ ಹೃತಿಕ್ ರೋಷನ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಆ್ಯಪಲ್ ಕಂಪನಿಯ ಈ ಹೊಸ ಜಾಹೀರಾತು ಎಷ್ಟು ಕಳಪೆಯಾಗಿದೆ ಮತ್ತು ಅಜ್ಞಾನದಿಂದ ಕೂಡಿದೆ’ ಎಂದು ಹೃತಿಕ್ ರೋಷನ್ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಹಲವು ಕಲಾ ಪ್ರಕಾರಗಳಿಗೆ ಆ್ಯಪಲ್ ಕಂಪನಿಯು ಈ ಜಾಹೀರಾತಿನ ಮೂಲಕ ಅವಮಾನ ಮಾಡಿದೆ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.