ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಪ್ರಶಸ್ತಿಗೆ ಡಾ.ಮನು ಬಳಿಗಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ (Dr. Mahesh Joshi) ಹೇಳಿದ್ದಾರೆ. ಚಾಮರಾಜ ಪೇಟೆಯಲ್ಲಿ (Chamarajpet)ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಪ್ರದಾನ ಮಾಡುವ ಶತಮಾನೋತ್ಸವ ದತ್ತಿ ಪ್ರಶಸ್ತಿಯ 2022ನೇ ಸಾಲಿನ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಆಯ್ಕೆಯಾಗಿದ್ದಾರೆ.
ಮೇ 5 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಂದು ಪ್ರಶಸ್ತಿಯನ್ನು ಪ್ರದಾನ ಮಾಡಲಾ ಗುವುದು ಎಂದರು. ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಾಗಿ ಮೀಸಲಿಟ್ಟಿರುವ ಎನ್.ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಹಾಗೂ ವಿ. ಗೌರಮ್ಮ ಗಂಗಾಧರಯ್ಯ ಸಿಬ್ಬಂದಿ ಸೇವಾ ದತ್ತಿ ಪ್ರಶಸ್ತಿ ಪ್ರಕಟಿಸಲಾಗಿದೆ.
2022ನೇ ಸಾಲಿನ ಎನ್. ರಮಾದೇವಿ ವಿಶ್ವೇಶ್ವರಯ್ಯ ದತ್ತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಹೆಚ್.ಮಂಜುಳಾ 2022ನೆಯ ಸಾಲಿನ ವಿ. ಗೌರಮ್ಮ ಗಂಗಾಧರಯ್ಯ ಸಿಬ್ಬಂದಿ ಸೇವಾ ದತ್ತಿ ಪ್ರಶಸ್ತಿಗೆ ಪರಿಷತ್ತಿನ ಹಿರಿಯ ಸಿಬ್ಬಂದಿ ಎನ್. ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ದತ್ತಿನ ದಾನಿಗಳು ಈ ಬಾರಿ ಹೆಚ್ಚುವರಿಯಾಗಿ ಮೂರು ಜನ ಕನ್ನಡ ಸಾಹಿತ್ಯ ಪರಿಷತ್ತಿನ ನಿವೃತ್ತ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಿವೃತ್ತ ಸಿಬ್ಬಂದಿಗಳಾದ ಎ. ಅಮರನಾಥ್, ನಾ. ಚಕ್ರಪಾಣಿ ಹಾಗೂ ಕೆ. ರಾಮೇಗೌಡ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದಾರೆ.