ಕನ್ನಡ ಡಿಜಿಟಲ್ ಕ್ಷೇತ್ರದಲ್ಲಿ ಸಕ್ಕತ್ ಸ್ಟುಡಿಯೋ ಟ್ರೆಂಡ್ಸೆಟ್ಟರ್ ಆಗಿರುವುದು ಸುಳ್ಳಲ್ಲಾ.. ಸುನೀಲ್ ರಾವ್, ಅನುಪಮಾ ಗೌಡ, ಸಿಂಧು ಲೋಕನಾಥ್ ಮುಂತಾದವರು ನಟಿಸಿರುವ “ಲೂಸ್ ಕನೆಕ್ಷನ್” ನಮ್ಮ ಕನ್ನಡದ ಮೊದಲ ವೆಬ್ ಸರಣಿಯ ನಿರ್ಮಿಸಿದ್ದು ಇದೇ ಸಂಸ್ಥೆ. ಸ್ಟಾರ್ ದಂಪತಿಗಳಾದ ಆರ್. ಜೆ. ಪ್ರದೀಪ್ ಮತ್ತು ಶ್ವೇತಾ ಆರ್ ಪ್ರಸಾದ್ ಅವರ ನೇತೃತ್ವದಲ್ಲಿ ಶುರುವಾದ ಸಕ್ಕತ್ ಸ್ಟುಡಿಯೋ ವೈವಿಧ್ಯಮಯ ವೆಬ್ ಸರಣಿಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತಲೇ ಇತ್ತು.
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ರವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರ ಸಹಯೋಗದೊಂದಿಗೆ ಸಕ್ಕತ್ ಸ್ಟುಡಿಯೋ, ನಾಗಭೂಷಣ ಮತ್ತು ಸಂಜನಾ ಆನಂದ್ ಅಭಿನಯದ “ಹನಿಮೂನ್”, ಪೂರ್ಣ ಮೈಸೂರು ಮತ್ತು ಸಿರಿ ರವಿಕುಮಾರ್ ಅಭಿನಯದ “ಬೈ ಮಿಸ್ಟೇಕ್” ಮತ್ತು ಅರವಿಂದ್ ಅಯ್ಯರ್ ಮತ್ತು ದಿಶಾ ಮದನ್ ಅಭಿನಯದ “ಹೇಟ್ ಯು ರೋಮಿಯೋ” ಹೀಗೆ ಉನ್ನತ ಮಟ್ಟದ ಸರಣಿಗಳು ನಿರ್ಮಾಣವಾಗಿ ವೂಟ್ ( Voot), ಆಹಾ (Aha ), ಮುಂತಾದ ಒಟಿಟಿ ಪ್ಲಾಟ್ಫಾರಂ ಗಳಲ್ಲಿ ನೋಡುಗರ ಗಮನ ಸೆಳೆದಿವೆ.
ಡಿಜಿಟಲ್ ಕ್ಷೇತ್ರದಲ್ಲಿ ಒಂದು ಸ್ಥಾನವನ್ನು ಯಶಸ್ವಿಯಾಗಿಸಿ, ಸಕ್ಕತ್ ಸ್ಟುಡಿಯೋ ಈಗ ಸಿನಿಮಾ ಜಗತ್ತಿಗೆ ಕಾಲಿಡುವ ಮೂಲಕ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ತನ್ನ ಮೊಟ್ಟಮೊದಲ ಚಿತ್ರದ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಿತ್ರದ ಮಹೂರ್ತಕ್ಕೆ ಆಗಮಿಸಿ ಕ್ಲಾಪ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು.
ದಕ್ಷಿಣ ಭಾರತದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ “ದಿ ಬೆಸ್ಟ್ ಆಕ್ಟರ್” ಮೈಕ್ರೊ ಮೂವಿ ನಿರ್ದೇಶನ ಸೇರಿದಂತೆ, ದಿವಂಗತ ಸಂಚಾರಿ ವಿಜಯ್ ನಟಿಸಿರುವ ‘ಪುಕ್ಸಟ್ಟೆ ಲೈಫ್ “ಚಿತ್ರವನ್ನು ನಿರ್ಮಿಸಿದ್ದ ನಾಗರಾಜ್ ಸೋಮಯಾಜಿ ಇದೀಗ ಸಕ್ಕತ್ ಸ್ಟುಡಿಯೋದ ಮೊದಲ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಮುಂಬರುವ ವಾರದಲ್ಲಿ ವಿಶಿಷ್ಟ ಶೀರ್ಷಿಕೆ, ಪರಿಕಲ್ಪನೆ ಮತ್ತು ತಾರಾಗಣವನ್ನು ಅನಾವರಣಗೊಳಿಸಲು ಯೋಜಿಸಿದೆ. ಇದು ಒಂದು ಅದ್ಭುತವಾದ ಸಿನಿಮೀಯ ಅನುಭವದ ಭರವಸೆಯನ್ನು ಈ ತಂಡ ನೀಡುತ್ತದೆ. ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ನಿರ್ಮಾಣವಾಗಬೇಕು ಹಾಗು ಗೆಲ್ಲಬೇಕೆಂಬ ನಿರೀಕ್ಷೆಯಲ್ಲಿರುವ ಪ್ರೇಕ್ಷಕ ವರ್ಗ, ಝೀ5ನ ಒಟಿಟಿ ಕ್ಷೇತ್ರದಲ್ಲಿ ಪ್ರದೀಪ್ ಅವರ ಹಿಂದಿನ ನಾಯಕತ್ವ ಮತ್ತು ಛಾಯಾಗ್ರಹಣ ಮತ್ತು ಕಥೆ ಹೇಳುವಿಕೆಯಲ್ಲಿ ನಾಗರಾಜ್ ಅವರ ಪ್ರಭಾವ, ಸೃಜನಶೀಲ ಮನಸ್ಸುಗಳನ್ನು ಒಳಗೊಂಡಿರುವ ತಂಡವು ನಿಸ್ಸಂದೇಹವಾಗಿ ‘ಸಕ್ಕತ್’ ಕನ್ನಡ ಚಿತ್ರವನ್ನು ಪ್ರೇಕ್ಷಕನಿಗೆ ನೀಡುತ್ತಾರೆಂಬ ಭರವಸೆ ಮೂಡಿಸಿದೆ.