ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ತಮ್ಮ ಹೇಳಿಕೆಗಳ ಮೂಲಕವೇ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ವರ್ಮಾ ಇದೀಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿಚಾರದಲ್ಲಿ ಮೂಗು ತೂರಿಸಿದ್ದಾರೆ.
ಇದುವರೆಗೂ ಸಿನಿಮಾಗಳಲ್ಲಿ ಮಾತ್ರವೇ ಅಂಡರ್ ವರ್ಲ್ಡ್ ಕಥೆಗಳನ್ನು ಹೇಳುತ್ತಿದ್ದ ವರ್ಮಾ ಇದೀಗ ರಿಯಲ್ ಅಂಡರ್ ವರ್ಲ್ಡ್ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ. ಇದರಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಆರ್ ಜಿ ವಿ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಆರ್ಜಿವಿ ಬಾಯಿಗೆ ಬಂದಂತೆ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಬಾಬಾ ಸಿದ್ಧಿಕಿ ಅವರ ಹತ್ಯೆ ನಡೆಯಿತು. ಸಲ್ಮಾನ್ ಖಾನ್ ಜೊತೆ ಬಾಬಾ ಸಿದ್ಧಿಕಿ ಅವರಿಗೆ ಆಪ್ತ ಒಡನಾಟ ಇತ್ತು. ಆ ಕಾರಣದಿಂದಲೇ ಬಾಬಾ ಸಿದ್ಧಿಕಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ಗೆ ಯಾರೆಲ್ಲ ಸಹಾಯ ಮಾಡುತ್ತಾರೋ ಅವರನ್ನು ಕೂಡ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಬರೆದುಕೊಂಡಿದ್ದಾರೆ.
‘ಬಿಷ್ಣೋಯ್ಗೆ ಸಲ್ಮಾನ್ ಖಾನ್ ತಿರುಗೇಟು ನೀಡಬೇಕು. ಇಲ್ಲದಿದ್ದರೆ ಇದು ಸ್ಟಾರ್ ನಟನ ಹೇಡಿತನದ ರೀತಿ ಕಾಣುತ್ತದೆ. ಬಿಷ್ಣೋಯ್ಗೆ ಹೋಲಿಸಿದರೆ ತಾವು ದೊಡ್ಡ ಸೂಪರ್ ಹೀರೋ ಎಂಬುದನ್ನು ಸಲ್ಮಾನ್ ಖಾನ್ ಅವರು ತಮ್ಮ ಅಭಿಮಾನಿಗಳಿಗಾಗಿ ಎದ್ದು ನಿಲ್ಲಬೇಕು’ ಎಂದು ರಾಮ್ ಗೋಪಾಲ್ ವರ್ಮಾ ಅವರು ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಲಾರೆನ್ಸ್ ಬಿಷ್ಣೋಯ್ನ ವ್ಯಕ್ತಿತ್ವವನ್ನು ವಿಶ್ಲೇಷಣೆ ಮಾಡುವಂತಹ ಪೋಸ್ಟ್ಗಳನ್ನು ಕೂಡ ರಾಮ್ ಗೋಪಾಲ್ ವರ್ಮಾ ಮಾಡಿದ್ದಾರೆ. ಆತನ ರೂಪ ಚೆನ್ನಾಗಿದೆ ಎಂದು ಹೊಗಳಿದ್ದಾರೆ. ಅಲ್ಲದೇ ಆತನನ್ನು ಹಿಂದೂ ಡಾನ್ ಎಂದು ಕೂಡ ಕರೆದಿದ್ದಾರೆ. ರಣಬೀರ್ ಕಪೂರ್ ನಟನೆಯ ಅನಿಮಲ್ಗಿಂತಲೂ ಕ್ರೂರಿ ಆತ ಎಂದು ಆರ್ಜಿವಿ ಹೇಳಿದ್ದಾರೆ.