ಸಲ್ಮಾನ್ ಖಾನ್ ಅವರನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಚ್ಚು ಟಾರ್ಗೆಟ್ ಮಾಡುತ್ತಿದೆ. ಜೈಲಿನಲ್ಲೇ ಇದ್ದುಕೊಂಡು ಗ್ಯಾಂಗ್ ಸ್ಟಾರ್ ಲಾರೆನ್ಸ್ ಬೆದರಿಕೆ ಹಾಕುತ್ತಿದ್ದಾನೆ. ಕೃಷ್ಣ ಮೃಗ ಕೊಂದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಬೆದರಿಕೆ ಎದುರಿಸುತ್ತಿದ್ದು ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಬಿಷ್ಣೋಯ್ ಗ್ಯಾಂಗ್ ಆಗ್ರಹಿಸಿದೆ. ಈ ಮಧ್ಯೆ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಂದೇ ಇಲ್ಲ ಎಂದು ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಹೇಳಿದ್ದಾರೆ.
ಕೃಷ್ಣ ಮೃಗವನ್ನು ಬಿಷ್ಣೋಯಿ ಸಮುದಾಯದವರು ದೇವರು ಎಂದು ಪರಿಗಣಿಸುತ್ತಾರೆ. ಸಲ್ಮಾನ್ ಕೃಷ್ಣ ಮೃಗವನ್ನು ಹತ್ಯೆ ಮಾಡಿದ ವಿಚಾರದಲ್ಲಿ ಲಾರೆನ್ಸ್ ಗ್ಯಾಂಗ್ಗೆ ಸಾಕಷ್ಟು ಸಿಟ್ಟು ಇದೆ. ಹೀಗಾಗಿ, ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ಮೂಲಕ ಈ ಗ್ಯಾಂಗ್ ಹಗೆ ತೀರಿಸಿಕೊಳ್ಳಲು ಮುಂದಾಗಿದೆ. ಸಲ್ಮಾನ್ ಖಾನ್ ಅವರು ಬಂದು ಅವರ ದೇವಸ್ಥಾನದಲ್ಲಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಕೇಳುತ್ತಿದ್ದಾನೆ. ಆದರೆ ಸಲ್ಮಾನ್ ಯಾವುದೇ ಪ್ರಾಣಿಗೆ ಹಾನಿ ಮಾಡಿಲ್ಲ ಎಂದು ಸಲೀಮ್ ಖಾನ್ ಹೇಳಿದ್ದಾರೆ.
‘ಅವನು (ಸಲ್ಮಾನ್ ಖಾನ್) ನನ್ನ ಬಳಿ ಸುಳ್ಳು ಹೇಳಲ್ಲ. ಸಲ್ಮಾನ್ಗೆ ಪ್ರಾಣಿಗಳ ಬೇಟೆ ಆಡೋದು ಇಷ್ಟ ಆಗಲ್ಲ. ಅವನಿಗೆ ಪ್ರಾಣಿಗಳು ಎಂದರೆ ಇಷ್ಟ’ ಎಂದಿದ್ದಾರೆ ಸಲೀಮ್ ಖಾನ್. ಈ ಮೂಲಕ ಮಗ ತಪ್ಪು ಮಾಡಿಲ್ಲ ಎಂದು ಸಲೀಮ್ ಖಾನ್ ಹೇಳಿದ್ದಾರೆ.
ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಬಿಷ್ಣೋಯ್ ಗ್ಯಾಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಲೀಮ್ ಖಾನ್, ‘ಕ್ಷಮೆ ಕೇಳಿದರೆ ತಪ್ಪು ಒಪ್ಪಿಕೊಂಡಂತೆ. ಸಲ್ಮಾನ್ ಖಾನ್ ಯಾವುದೇ ಪ್ರಾಣಿಯನ್ನು ಹತ್ಯೆ ಮಾಡಿಲ್ಲ. ನಾವು ಜಿರಳೆಯನ್ನೂ ಕೊಂದವರಲ್ಲ. ನಾವು ಅದರ ಬಗ್ಗೆ ನಂಬಿಕೆ ಇಟ್ಟಿಲ್ಲ’ ಎಂದಿದ್ದಾರೆ ಸಲೀಮ್ ಖಾನ್.
‘ಸಲ್ಮಾನ್ ಖಾನ್ ಯಾರಲ್ಲಿ ಕ್ಷಮೆಕೇಳಬೇಕು? ನೀವು ಎಷ್ಟು ಜನರಿಗೆ ಕ್ಷಮೆ ಕೇಳಿದ್ದೀರಿ? ನೀವು ಎಷ್ಟು ಪ್ರಾಣಿಗಳ ಜೀವ ಉಳಿಸಿದ್ದೀರಿ? ನನ್ನ ಮಗ ಯಾವ ತಪ್ಪು ಮಾಡಿದ್ದಾನೆ? ನೀನು ಅದನ್ನು ನೋಡಿದ್ದೀಯಾ? ನೀನು ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದೀಯಾ? ನಾನು ಗನ್ ಕೂಡ ಬಳಸಿಲ್ಲ’ ಎಂದು ಸಲೀಮ್ ಖಾನ್ ಕೇಳಿದ್ದಾರೆ.