ನವದೆಹಲಿ: ಜನಾಂಗೀಯ ನಿಂದನೆ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದ ಸ್ಯಾಮ್ ಪಿತ್ರೋಡಾ ತಲೆದಂಡವಾಗಿದೆ. ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಸ್ಯಾಮ್ ಪಿತ್ರೋಡಾ ರಾಜೀನಾಮೆ ಮಾಹಿತಿ ನೀಡಿದ್ದನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಸಮಯದಲ್ಲೇ ಪಿತ್ರಾರ್ಜಿತ ಆಸ್ತಿ ಮರು ಹಂಚಿಕೆ ಮತ್ತು ಈಗ ಭಾರತೀಯರ ಬಣ್ಣದ ಬಗ್ಗೆ ಜನಾಂಗೀಯ ನಿಂದನೆ ಬಗ್ಗೆ ಮಾತನಾಡಿ ವಿವಾದ ಹುಟ್ಟು ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಪಿತ್ರೋಡಾ ಮುಜುಗರ ತಂದಿದ್ದರು.
ಪಿತ್ರೋಡಾಹೇಳಿದ್ದೇನು?
ಭಾರತದ ಪೂರ್ವದ ಜನರು ಚೀನಿಯರಂತೆ, ಪಶ್ಚಿಮದ ಜನರು ಅರಬ್ಬರಂತೆ ಕಾಣಿಸುತ್ತಾರೆ. ಉತ್ತರ ಭಾರತದವರು ಬಹುಶಃ ಬಿಳಿಯರಂತೆ ಕಂಡರೆ, ದಕ್ಷಿಣ ಭಾರತದ ಜನ ಆಫ್ರಿಕನ್ನರಂತೆ ಕಾಣಿಸುತ್ತಾರೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಮಾತ್ರ ಎಲ್ಲರನ್ನೂ ಒಟ್ಟಿಗೆ ನೋಡಲು ಸಾಧ್ಯ. ನಾವೆಲ್ಲರೂ ಸಹೋದರ -ಸೋದರಿಯರಂತೆ ಜೀವಿಸುತ್ತಿದ್ದೇವೆ. ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದಲ್ಲಿ ಬೇರೂರಿರುವ ಭಾರತದ ಮೂಲಭೂತ ತತ್ವಗಳು ಪ್ರಸ್ತುತ ಸವಾಲಿನಲ್ಲಿದೆ.
ಈಗ ಭಾರತ ರಾಮ ನವಮಿ, ರಾಮ ಮಂದಿರದಿಂದ ಸವಾಲನ್ನು ಎದುರಿಸುತ್ತಿದೆ. ಸದಾಕಾಲ ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಭಾರತೀಯ ನಾಯಕನಂತೆ ಮಾತನಾಡದೇ ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿದ್ದಾರೆ. ಅಮೆರಿಕದಲ್ಲಿ ವ್ಯಕ್ತಿಯೊಬ್ಬ 100 ಮಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಆತನ 45 ಪ್ರತಿಶತ ಸಂಪತ್ತು ಮಕ್ಕಳಿಗೆ ವರ್ಗಾವಣೆಯಾಗುತ್ತದೆ.
55% ಸಂಪತ್ತು ಸರ್ಕಾರಕ್ಕೆ ಹೋಗುತ್ತದೆ. ಇದೊಂದು ಆಸಕ್ತಿದಾಯಕ ಕಾನೂನು. ಈ ರೀತಿಯ ಯಾವುದೇ ಕಾನೂನು ಭಾರತದಲ್ಲಿ ಇಲ್ಲ. ಯಾರಾದರೂ 10 ಶತಕೋಟಿ ಮೌಲ್ಯದವರು ಮೃತಪಟ್ಟರೆ ಅವರ ಮಕ್ಕಳು 10 ಶತಕೋಟಿ ಪಡೆಯುತ್ತಾರೆ ಮತ್ತು ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಈ ರೀತಿಯ ವಿಷಯಗಳ ಬಗ್ಗೆ ಜನರು ಚರ್ಚಿಸಬೇಕು. ಕಾಂಗ್ರೆಸ್ ಪಕ್ಷವು ಸಂಪತ್ತಿನ ಹಂಚಿಕೆಯನ್ನು ಉತ್ತಮಗೊಳಿಸುವ ನೀತಿಯನ್ನು ರೂಪಿಸುತ್ತದೆ ಎಂದಿದ್ದರು.