ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುಪ್ರಸಾದ್ ನಿಧನ ಕುಟುಂಬದವರಿಗೆ ಹಾಗೂ ಆಪ್ತರಿಗೆ ಆಘಾತ ಉಂಟಾಗಿದೆ. ಗುರುಪ್ರಸಾದ್ ಮೊದಲ ಪತ್ನಿ ಆರತಿಗೆ ವಿಚ್ಛೇದನ ನೀಡಿ, 2ನೇ ಮದುವೆ ಆಗಿದ್ದರು. ಎರಡನೇ ಪತ್ನಿ ಸುಮಿತ್ರಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಒಂದಷ್ಟು ವಿಷಯಗಳನ್ನು ತಿಳಿಸಿದ್ದಾರೆ. ಗಂಡನ ಸಾವಿನಲ್ಲಿ ತಮಗೆ ಯಾವುದೇ ಅನುಮಾನ ಇಲ್ಲ ಎಂದು ಸುಮಿತ್ರಾ ಹೇಳಿದ್ದಾರೆ. ಸಾಲಭಾದೆಯಿಂದ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಮಿತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ನಾನು ಸುಮಾರು 4 ವರ್ಷದ ಹಿಂದೆ ಅಂದರೆ 2020ನೇ ವರ್ಷದಲ್ಲಿ ಗುರುಪ್ರಸಾದ್ ಅವರನ್ನು ವಿವಾಹವಾಗಿರುತ್ತೇನೆ. ನಮಗೆ ನಗು ಶರ್ಮಾ ಎಂಬ 4 ವರ್ಷದ ಹೆಣ್ಣು ಮಗು ಇದೆ. ಈ ಹಿಂದೆ ಗುರುಪ್ರಸಾದ್ ಅವರಿಗೆ ಆರತಿ ಎಂಬುವರರ ಜೊತೆ ಮದುವೆಯಾಗಿದ್ದು, ಸದರಿ ಮದುವೆಯು ವಿಚ್ಚೇಧನವಾಗಿರುತ್ತದೆ. ಅವರು ಸಿನಿಮಾ ನಿರ್ದೇಶಕ ಆದ್ದರಿಂದ ಮದುವೆ ಆದಾಗಿನಿಂದಲೂ 4 ವರ್ಷ ಜೊತೆಗಿದ್ದು ಕನಕಪುರ ರಸ್ತೆಯಲ್ಲಿ, ಎನ್.ಎ.ಪಿ.ಎ ವ್ಯಾಲೆ, ರಾಜರಾಜೇಶ್ವರಿ ನಗರದ ಈಸಿ ಡಿವೈನ್ ಬ್ಲಾಕ್ ಹಾಗೂ ಬಸವೇಶ್ವರನಗರದ ಬಾಲಾಜಿ ರೆಸಿಡೆನ್ಸಿಯಲ್ಲಿ ಜೀವನ ಸಾಗಿಸುತ್ತಿದೆವು. ನಂತರ ನಾನು, ನನ್ನ ಯಜಮಾನರು ಈ 6 ತಿಂಗಳಿಂದ ಮನೆ ಖಾಲಿ ಮಾಡಿಕೊಂಡು ದಾಸನಪುರ ರಸ್ತೆಯಲ್ಲಿರುವ ಟಾಟಾ ನ್ಯೂ ಹೆವನ್ ಅಪಾರ್ಟ್ಮೆಂಟ್ ಟವರ್ ನಂ.27ರಲ್ಲಿನ ಮನೆ ನಂಬರ್ 11, ಮೊದಲನೆಯ ಮಹಡಿಯಲ್ಲಿ ಬಾಡಿಗೆಗೆ ವಾಸವಾಗಿದ್ದೇವು’.
‘ನನಗೆ ಆರೋಗ್ಯ ಸರಿಯಿಲ್ಲದ ಕಾರಣ ನಮ್ಮ ಯಜಮಾನರು ನನ್ನನ್ನು ತಾಯಿಯ ಮನೆಯಲ್ಲಿ ಇರಲು ಹೇಳಿ ಕಳುಹಿಸಿಕೊಟ್ಟರು. ಲೋಕಸಭೆ ಚುನಾವಣೆ ಸಮಯದಲ್ಲಿ ಕೊನೆಯ ಬಾರಿ ಸಿಕ್ಕಿದ್ದೆವು. ನಮ್ಮ ಯಜಮಾನರು ಚಲನಚಿತ್ರ ಕೆಲಸದಲ್ಲಿ ಬ್ಯೂಸಿ ಆಗಿದ್ದರಿಂದ ನಾನು ದೂರವಾಣಿ ಮೂಲಕ ಸಂಪರ್ಕದಲ್ಲಿದ್ದೆವು. ಅನಂತರ ದಿನಾಂಕ 25.10.2024ರಂದು ನಾನು ನನ್ನ ಯಜಮಾನರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದು, ಅವರು ರಿಸೀವ್ ಮಾಡಲಿಲ್ಲ. ಅವರು ಬ್ಯೂಸಿ ಇರಬಹುದು ಎಂದು ಸುಮ್ಮನಾದೆನು.
ದಿನಾಂಕ 03.11.2024ರಂದು ಬೆಳಿಗ್ಗೆ 11 ಗಂಟೆಯ ಸಮಯದಲ್ಲಿ ಅಪಾರ್ಟ್ಮೆಂಟ್ ನಿವಾಸಿ ಜಯರಾಮ್ ಎಂಬುವರು ದೂರವಾಣಿ ಮೂಲಕ ನೀವು ವಾಸವಿದ್ದ ಮನೆಯಿಂದ ಏನೋ ಒಂದು ಥರ ದುರ್ವಾಸನೆ ಬರುತ್ತಿದೆ. ಮನೆಯ ಬಾಗಿಲು ಬಳಿ ಹೋಗಿ ಬಾಗಿಲು ತಟ್ಟಿದರೆ ಯಾರೂ ರೆಸ್ಪಾಂಡ್ ಮಾಡುತ್ತಿಲ್ಲ ಅಂದರು. ನಾನು ಗಾಬರಿಯಿಂದ ಕುಟುಂಬದವರ ಜತೆ ಸೇರಿ ನೋಡಲಾಗಿ ಮನೆಯ ಬಾಗಿಲು ಹಾಕಿದ್ದು, ನಮ್ಮ ಯಜಮಾನರು ಕೂಗಿದರೂ ಏನೂ ಮಾತನಾಡಲಿಲ್ಲ. ದುರ್ವಾಸನೆ ಬರುತ್ತಿತ್ತು.’
‘ಅಕ್ಕ ಪಕ್ಕದವರ ಸಹಾಯದಿಂದ ಮತ್ತು ಪೊಲೀಸರ ನೆರವಿನೊಂದಿಗೆ ಬಾಗಿಲನ್ನು ಮೀಟಿ ಒಳಗೆ ಹೋಗಿ ನೋಡಲಾಗಿ, ನನ್ನ ಗಂಡ ಗುರುಪ್ರಸಾದ್ ನೇಣು ಬಿಗಿದ ಸ್ಥಿತಿಯಲ್ಲಿ ಶರೀರವೆಲ್ಲಾ ಊದಿಕೊಂಡು ದುರ್ವಾಸನೆ ಬರುತ್ತಿತ್ತು. ನಮ್ಮ ಯಜಮಾನರು ಸಿನಿಮಾ ವಿಚಾರದಲ್ಲಿ ಸಾಲ ಮಾಡಿಕೊಂಡಿದ್ದು, ಈ ವಿಚಾರ ತಿಳಿದಿದ್ದು, ನಾನು ನಮ್ಮ ಯಜಮಾನರಿಗೆ ತೀರಿಸೋಣವೆಂದು ಧೈರ್ಯ ಹೇಳಿದ್ದೆ. ಆದರೂ ನನ್ನ ಮಾತನ್ನು ಲೆಕ್ಕಿಸದೇ ನನ್ನ ಗಂಡ ಸಾಲದ ಭಾದೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು 3-4 ದಿನಗಳ ಹಿಂದೆ ಯಾವುದೋ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ನನ್ನ ಗಂಡನ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ ಎಂದು ಸುಮಿತ್ರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.