ಮಧ್ಯ ಪ್ರದೇಶ: ಸನಾತನ ಧರ್ಮವು ರಾಷ್ಟ್ರೀಯ ಧರ್ಮ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅಷ್ಟೇ ಅಲ್ಲ, ಭಾರತದ ಎಲ್ಲ ಪ್ರಜೆಗಳೂ ಹಿಂದೂಗಳೇ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸನಾತನ ಧರ್ಮವು ಶಾಶ್ವತವಾದದ್ದು ಎಂದಿರುವ ಯೋಗಿ ಆದಿತ್ಯನಾಥ್, ಈ ಧರ್ಮದ ನಿರಂತರತೆ ಬಗ್ಗೆ ಯಾರೂ ಪ್ರಶ್ನೆ ಮಾಡಲಾಗದು ಎಂದಿದ್ದಾರೆ. ಅಷ್ಟೇ ಅಲ್ಲ, ಸನಾತನ ಧರ್ಮವು ಭಾರತ ದೇಶದ ರಾಷ್ಟ್ರೀಯ ಧರ್ಮ ಎಂದು ಯೋಗಿ ಆದಿತ್ಯನಾಥ್ ಹೇಳಿದ್ಧಾರೆ. ಮಧ್ಯ ಪ್ರದೇಶ ರಾಜ್ಯದ ಇಂಧೋರ್ ನಗರದಲ್ಲಿ ಇರುವ ಶ್ರೀನಾಥ ದೇಗುಲದ ಧ್ವಜ ಸ್ಥಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹಿಂದೂ ಎಂಬ ಪದವು ಯಾವುದೇ ಧಾರ್ಮಿಕ ಪದ ಅಲ್ಲ. ಇದು ಭಾರತದ ಸಾಂಸ್ಕೃತಿಕ ಹೆಗ್ಗುರುತು ಎಂದು ಹೇಳಿದ ಯೋಗಿ ಆದಿತ್ಯನಾಥ್, ದುರಾದೃಷ್ಟವಶಾತ್ ಕೆಲವರು ಹಿಂದೂ ಎಂಬ ಪದವನ್ನು ಸಂಕುಚಿತ ದೃಷ್ಟಿಕೋನದಲ್ಲಿ ನೋಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳ ಮುಸ್ಲಿಮರು ಮೆಕ್ಕಾಗೆ ಹಜ್ ಯಾತ್ರೆಗೆ ಹೋದಾಗ, ಸೌದಿ ಅರೇಬಿಯಾದ ಮಂದಿ ಅವರನ್ನು ಹಿಂದೂಗಳು ಎಂದೇ ಗುರ್ತಿಸುತ್ತಾರೆ.
ಹೀಗಾಗಿ, ಹಿಂದೂ ಅನ್ನೋದು ಜಾತಿ ಸೂಚಕ ಪದ ಅಲ್ಲ, ಅದು ಭಾರತದ ಸಾಂಸ್ಕೃತಿಕ ಹೆಗ್ಗುರುತು ಎಂದು ಯೋಗಿ ಆದಿತ್ಯ ನಾಥ್ ಪ್ರತಿಪಾದಿಸಿದ್ದಾರೆ. ಎರಡು ಶ್ಲೋಕಗಳನ್ನು ಉಲ್ಲೇಖಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಹಿಂದೂಸ್ತಾನದಲ್ಲಿ ನೆಲೆಸಿರುವ ಎಲ್ಲರ ಹಿಂದೂಗಳೇ. ಆದರೆ, ಭಾರತದ ಪುರಾಣಗಳು, ಭಾರತದ ನೈಜನತೆಯನ್ನು ಅಳಿಸಿ ಹಾಕಲು ಯತ್ನಿಸುತ್ತಿರುವವರು ದೇಶದ ಭವ್ಯ ಇತಿಹಾಸವನ್ನೇ ಅಳಿಸಲು ಯತ್ನಿಸುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಕಿಡಿ ಕಾರಿದ್ದಾರೆ.