ಕೋಲ್ಕತ್ತಾ: ಸಂದೇಶ್ಖಾಲಿ ಪ್ರಕರಣದ ಪ್ರಮುಖ ಆರೋಪಿ, ತೃಣಮೂಲ ಕಾಂಗ್ರೆಸ್ (TMC) ಮುಖಂಡ ಶೇಖ್ ಷಹಜಹಾನ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಷಹಜಹಾನ್ ಮತ್ತು ಆತನ ಸಹಚರರು ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪ ಹೊತ್ತಿದ್ದಾರೆ. ಹೀಗಾಗಿ, ಉತ್ತರ 24 ಪರಗಣ ಜಿಲ್ಲೆಯಲ್ಲಿ ಶೇಖ್ ಷಹಜಹಾನ್ನನ್ನು ಬಂಗಾಳದ ವಿಶೇಷ ಪೊಲೀಸ್ ತಂಡವು ಮಧ್ಯರಾತ್ರಿ ಬಂಧಿಸಿದೆ.
ಈತ 55 ದಿನಗಳಿಂದ ಪರಾರಿಯಾಗಿದ್ದ. ಬಂಧನದ ನಂತರ ಆತನನ್ನು ಬಸಿರ್ಹತ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಬಂಧನಕ್ಕೆ ಮುನ್ನ ಹಲವು ದಿನಗಳಿಂದ ಆತನ ಚಟುವಟಿಕೆಗಳ ಮೇಲೆ ತಂಡ ನಿಗಾ ಇರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂದೇಶ್ಖಾಲಿ ಪ್ರಕರಣದಲ್ಲಿ ಟಿಎಂಸಿ ನಾಯಕ ಹೆಸರನ್ನೂ ಸೇರಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದ ಮೂರು ದಿನಗಳ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಆತನಿಗೆ ನೋಟಿಸ್ ನೀಡಬೇಕು. ಬಂಧನ ವಿಚಾರವಾಗಿ ಯಾವುದೇ ಕಾರಣ ನೀಡುವಂತಿಲ್ಲ ಎಂದು ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿತ್ತು.