ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿರುವ ಬಾಲಕನನ್ನು ನಟ ಅಲ್ಲು ಅರ್ಜುನ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 8 ವರ್ಷದ ಶ್ರೀ ತೇಜನನ್ನು ಇಂದು ಅಲ್ಲು ಅರ್ಜುನ್ ಭೇಟಿಯಾಗಿದ್ದಾರೆ. ಸಿಕಂದರಾಬಾದ್ನ ಕಿಮ್ಸ್ ಆಸ್ಪತ್ರೆಗೆ ಆಗಮಿಸಿ ಗಾಯಾಳುವಿನ ಆರೋಗ್ಯ ಪರಿಸ್ಥಿತಿಯನ್ನು ವಿಚಾರಿಸಿದ್ದಾರೆ.
ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಅವರೊಂದಿಗೆ ಅಲ್ಲು ಅರ್ಜುನ್ ಸುಮಾರು 30 ನಿಮಿಷಗಳ ಕಾಲ ಆಸ್ಪತ್ರೆಯಲ್ಲಿದ್ದರು. ಸುದೀರ್ಘ ಹೋರಾಟದ ನಂತರ ಚೇತರಿಸಿಕೊಳ್ಳುತ್ತಿರುವ ಬಾಲಕನ ಸ್ಥಿತಿಯನ್ನು ನಟ ವಿಚಾರಿಸಿದರು. ಶ್ರೀ ತೇಜ ಸುಮಾರು 3 ವಾರಗಳ ಕಾಲ ವೆಂಟಿಲೇಟರ್ನಲ್ಲಿದ್ದರು. 20 ದಿನಗಳ ನಂತರ ಡಿಸೆಂಬರ್ 24ರಂದು ಚಿಕಿತ್ಸೆಗೆ ಸ್ಪಂದಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಬಾಲಕನ ಭೇಟಿಗೆ ಅಲ್ಲು ಅರ್ಜುನ್ ಇಚ್ಛಿಸಿದ್ದರೂ ಕೂಡಾ ಪೊಲೀಸರ ನಿರ್ದೇಶನದಿಂದಾಗಿ ವಿಳಂಬವಾಗಿತ್ತು. ಆರಂಭದಲ್ಲಿ, ಜಾಮೀನು ಷರತ್ತುಗಳ ಭಾಗವಾಗಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ನ್ಯಾಯಾಲಯದ ಆದೇಶವನ್ನು ಪಾಲಿಸಿದ ನಂತರ ಜನವರಿ 5ರಂದು ಆಸ್ಪತ್ರೆಗೆ ಭೇಟಿ ನೀಡಲು ಮುಂದಾಗಿದ್ದರು. ಆದರೆ, ಮಾಧ್ಯಮಗಳು ಮತ್ತು ಸಾರ್ವಜನಿಕರಿಂದಾಗಿ ಆಸ್ಪತ್ರೆಯ ಕೆಲಸಗಳಿಗೆ ಅಡ್ಡಿಯಾಗಬಹುದು, ಹಾಗಾಗಿ ಈ ಭೇಟಿಯನ್ನು ಮರುಪರಿಶೀಲಿಸುವಂತೆ ಸೂಚಿಸಿ ರಾಮಗೋಪಾಲಪೇಟೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಗೌಪ್ಯತೆಯ ಅಗತ್ಯತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅವರ ಭೇಟಿಯ ವ್ಯವಸ್ಥೆಗೆ ಜನವರಿ 6ರಂದು ಎರಡನೇ ನೋಟಿಸ್ ಜಾರಿ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ನಡುವೆಯೇ ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡಿದ್ದು ಬಾಲಕನ ಆರೋಗ್ಯ ವಿಚಾರಿಸಿದ್ದಾರೆ.