ಕೆಜಿಎಫ್ ಸಿನಿಮಾದ ಬಳಿಕ ಬಾಲಿವುಡ್ ನಟ ಸಂಜಯ್ ದತ್ ಗೆ ಅದೃಷ್ಟ ಖುಲಾಯಿಸಿದೆ. ಕೆಜಿಎಫ್ ಬಳಿಕ ಸಂಜಯ್ ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಸಂಜಯ್ ದತ್, ಕಳೆದ ಕೆಲ ವರ್ಷಗಳಿಂದ ಧಾರ್ಮಿಕತೆಯತ್ತ ಮುಖ ಮಾಡಿದ್ದದು, ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಅಂತೆಯೇ ಕರ್ನಾಟಕದ ಪ್ರಸಿದ್ಧ ದೇವಾಲಯ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಮ್ಮ ಕೆಲವು ಗೆಳೆಯರೊಟ್ಟಿಗೆ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದಿದ್ದ ಸಂಜಯ್ ದತ್ ಅವರು ಹುಲಿ ಕುಣಿತದ ಊದು ಪೂಜೆ ಯಲ್ಲಿ ಭಾಗವಹಿದರು. ಇದೇ ಪೂಜೆಯಲ್ಲಿ ಪಾಲ್ಗೊಳ್ಳಲೆಂದು ಸಂಜಯ್ ದತ್ ಅವರು ಮುಂಬೈನಿಂದ ಮಂಗಳೂರಿಗೆ ಬಂದಿದ್ದರು. ಬಿರುವೆರ್ ಕುಡ್ಲ ಸಂಘಟನೆಯ ಹುಲಿವೇಷ ಕುಣಿತದ ಊದು ಪೂಜೆ ಆಯೋಜಿಸಿದ್ದರು. ಈ ವಿಶೇಷ ಪೂಜೆಯಲ್ಲಿ ನಟ ಸಂಜಯ್ ದತ್ ಭಾಗವಹಿಸಿದ್ದರು.
ದೇವಾಲಯಕ್ಕೆ ಆಗಮಿಸಿದ್ದ ಸಂಜಯ್ ದತ್ ಅವರಿಗೆ ದೇವಸ್ಥಾನದ ವತಿಯಿಂದ ವಿಶೇಷ ಗೌರವ ಸಲ್ಲಿಕೆ ಮಾಡಲಾಯ್ತು. ದೇವರ ಶೇಷ ವಸ್ತ್ರ, ಪ್ರಸಾದ ನೀಡಿ ಗೌರವಿಸಲಾಯ್ತು. ಸಂಜಯ್ ದತ್ ದೇವಾಲಯಕ್ಕೆ ಆಗಮಿಸಿದಾಗ ಸುದ್ದಿ ತಿಳಿದು ಹಲವು ಮಂದಿ ಅವರನ್ನು ನೋಡಲು ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿ ಬಿದ್ದರು.