ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟಿ ಸಪ್ತಮಿ ಗೌಡ ಸದ್ಯ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಹಿಂದಿ ಸಿನಿಮಾದಲ್ಲಿ ನಟಿಸಿ ಬಂದಿರುವ ಚೆಲುವೆ ಇದೀಗ ಸ್ಟಾರ್ ನಟನಿಗೆ ಜೋಡಿಯಾಗುವ ಮೂಲಕ ಟಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ.
ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸ್ವತಃ ಸಪ್ತಮಿ ಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನಿತಿನ್ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನಾನು ಹೋಗಿ ಸೆಟ್ ಸೇರಿಕೊಳ್ಳಬೇಕಿದೆ’ ಎಂದಿದ್ದಾರೆ.
ಚಿತ್ರಕ್ಕಾಗಿ ಸಪ್ತಮಿ ಗೌಡ ಕುದುರೆ ಸವಾರಿ ಕಲಿಯುತಿದ್ದಾರೆ. ಈ ಬಗ್ಗೆಯೂ ಹೇಳಿಕೊಂಡಿರುವ ನಟಿ, ‘ನಾನು ಕುದುರೆ ಸವಾರಿ ಕಲಿಯುತ್ತಿದ್ದೇನೆ. ಸಂಪೂರ್ಣವಾಗಿ ಕಲಿತಿಲ್ಲ. ಇನ್ನೂ ಕಲಿಯುತ್ತಿದ್ದೇನೆ’ ಎಂದಿದ್ದಾರೆ. ಸದ್ಯ ಪಾತ್ರದ ಬಗ್ಗೆ ಅವರು ಹೆಚ್ಚು ಮಾಹಿತಿ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
ಸಪ್ತಮಿ ಗೌಡ ಅವರು ಮೊದಲು ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದಲ್ಲಿ ರಗಡ್ ಅವತಾರ ತಾಳಿದ್ದರು. ಆ ಬಳಿಕ ‘ಕಾಂತಾರ’ಸಿನಿಮಾದಲ್ಲಿ ಲೀಲಾ ಹೆಸರಿನ ಪಾತ್ರ ಮಾಡಿದರು. ಈ ಪಾತ್ರವೂ ಗಮನ ಸೆಳೆಯಿತು. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ಅವರು ವಿಜ್ಞಾನಿಯ ಪಾತ್ರ ಮಾಡಿದರು. ‘ಯುವ’ ಸಿನಿಮಾದಲ್ಲಿ ಕಾಲೇಜು ಹುಡುಗಿಯಾಗಿ ನಟಿಸಿದ್ದರು. ಈಗ ಅವರ ತೆಲುಗಿನ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ.