ಪಾಕಿಸ್ತಾನದಲ್ಲಿ ಜೈಲು ಸೇರಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ನನ್ನು ಹತ್ಯೆ ಮಾಡಿದ್ದ ಹಂತಕ ಅಮೀರ್ ಸರ್ಫರಾಜ್ ಅಲಿಯಾಸ್ ತಾಂಬಾನನ್ನು ಲಾಹೋರ್ನಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪಾಕಿಸ್ತಾನದ ಲಾಹೋರ್ನ ಇಸ್ಲಾಂಪುರ ಪ್ರದೇಶದಲ್ಲಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತಾಂಬಾ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ತಾಂಬಾನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 1990ರಲ್ಲಿ ಬಾಂಬ್ ಸ್ಫೋಟ ಘಟನೆ ಸಂಭವಿಸಿ 14 ಮಂದಿ ಬಲಿಯಾಗಿದ್ದರು. ಭಾರತದಿಂದ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಭಾಗಕ್ಕೆ ಹೋಗಿದ್ದ ಪಂಜಾಬ್ನ ಸರಬ್ಜಿತ್ ಸಿಂಗ್ರನ್ನು ಪಾಕಿಸ್ತಾನದ ಸೈನಿಕರು ಹಿಡಿದಿದ್ದರು. ಪಂಜಾಬ್ ಬಾಂಬ್ ಸ್ಫೋಟ ಘಟನೆಯಲ್ಲಿ ಸರಬ್ಜಿತ್ ಕೈವಾಡ ಇದೆ ಎಂದು ಪಾಕಿಸ್ತಾನ ಬಗೆಯಿತು. ಭಾರತದ ಅಧಿಕಾರಿಗಳು ಮತ್ತು ಸರಬ್ಜಿತ್ ಸಿಂಗ್ ಕುಟುಂಬ ಈ ಆರೋಪವನ್ನು ನಿರಾಕರಿಸಿದರೂ ಅವರನ್ನು ಜೈಲಿನಲ್ಲಿ ಕೂಡಿ ಹಾಕಲಾಗಿತ್ತು.
ಲಾಹೋರ್ನ ಕೋಟ ಲಖಪತ್ ಜೈಲಿನಲ್ಲಿ 23 ವರ್ಷ ಕಾಲ ಸರಬಜಿತ್ ಸಿಂಗ್ ಅವರನ್ನು ಇರಿಸಲಾಗಿತ್ತು. ಭಾರತದಲ್ಲಿ ಅಫ್ಜಲ್ ಗುರುವನ್ನು ನೇಣಿಗೆ ಹಾಕಿದ ಬಳಿಕ ಲಾಹೋರ್ ಜೈಲಿನಲ್ಲಿ ಸರಬಜಿತ್ ಸಿಂಗ್ ಮೇಲೆ ಆಮಿರ್ ಸರ್ಫರಾಜ್ ಹಾಗೂ ಇತರ ಕೈದಿಗಳು ಮಾರಣಾಂತಿಕ ಹಲ್ಲೆ ಎಸಗಿದ್ದರು.