ಮುಂಬೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟರ್ ಸರ್ಫರಾಝ್ ಖಾನ್, ತಮ್ಮ ವೈವಾಹಿಕ ಜೀವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಜಮ್ಮು – ಕಾಶ್ಮೀರದ ಶೊಪಿಯಾನ್ ಜಿಲ್ಲೆಯಲ್ಲಿ ಭಾನುವಾರ (ಆಗಸ್ಟ್ 7) ನಡೆದ ಖಾಸಗಿ ಸಮಾರಂಭದಲ್ಲಿ ಕಣಿವೆ ರಾಜ್ಯದ ಸುಂದರಿಯನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ತಮ್ಮ ವಿವಾಹದ ಸುದ್ದಿಯನ್ನು ಸರ್ಫರಾಝ್ ಖಾನ್ ಸೋಷಿಯಲ್ ಮೀಡಿಯಾಗಳ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.
ವಿವಾಹದ ಬಳಿಕ ಸ್ಥಳೀಯ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸರ್ಫರಾಝ್ ಖಾನ್, ತಮ್ಮ ವಿವಾಹ ಇದೇ ರೀತಿ ಆಗಬೇಕೆಂಬುದು ವಿಧಿ ಲಿಖಿತವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ತಂಡದ ಪರ ಆಡುವ ಆಶಾಭಾವವನ್ನೂ ಇದೇ ವೇಳೆ ಹೊರಹಾಕಿದ್ದಾರೆ.
25 ವರ್ಷದ ಬಲಗೈ ಬ್ಯಾಟರ್ ಹಾಗೂ ವಿಕೆಟ್ಕೀಪರ್, ದೇಶಿ ಕ್ರಿಕೆಟ್ನಲ್ಲಿ ಈವರೆಗೆ ಆಡಿರುವ 39 ಪ್ರಥಮದೆರ್ಜೆ ಪಂದ್ಯಗಳಲ್ಲಿ ಒಟ್ಟಾರೆ 3559 ರನ್ಗಳನ್ನು ಬಾರಿಸಿದ್ದಾರೆ. ಇದರಲ್ಲಿ 13 ಶತಕಗಳು ಸೇರಿವೆ. 301* ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ರಣಜಿ ಟ್ರೋಫಿ ಕ್ರಿಕೆಟ್ನ ಕಳೆದ 4 ಆವೃತ್ತಿಗಳಲ್ಲಿ ಸರ್ಫರಾಝ್ ಖಾನ್, 74.14ರ ಸರಾಸರಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ಬ್ಯಾಟರ್ ಆಗಿದ್ದಾರೆ.
2023-24ರ ಸಾಲಿನ ದೇಶಿ ಕ್ರಿಕೆಟ್ ಚಟುವಟಿಕೆಗಳು ಮತ್ತೆ ಶುರುವಾಗಲಿದ್ದು, ಈ ಬಾರಿಯೂ ತಮ್ಮ ಆರ್ಭಟ ಮುಂದುವರಿಸಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಕಡೆಗೆ ಸರ್ಫರಾಝ್ ಖಾನ್ ಗಮನ ನೀಡಿದ್ದಾರೆ. ಭಾರತ ‘ಎ’ ತಂಡದಲ್ಲಿ ಆಡುವ ಅವಕಾಶ ಪಡೆದಿರುವ ಸರ್ಫರಾಝ್ಗೆ ಶೀಘಘ್ರವೇ ಟೀಮ್ ಇಂಡಿಯಾದ ಕದ ಕೂಡ ತೆರೆದರೆ ಅಚ್ಚರಿಯೇನಿಲ್ಲ.