ಭೋಪಾಲ್: ಕಳೆದ ವರ್ಷ ನಮೀಬಿಯಾದಿಂದ ತರಲಾದ 8 ಚೀತಾಗಳ ಪೈಕಿ ಒಂದು ಹೆಣ್ಣು ಚೀತಾ ಸೋಮವಾರ ಮೃತಪಟ್ಟಿದೆ. ಮೃತ ಚೀತಾ ‘ಸಾಶಾ’ ಕಳೆದ ಜನವರಿಯಿಂದಲೂ ಮೂತ್ರಪಿಂಡಕ್ಕೆ ಸಂಬಂಧಿತ ಸೋಂಕಿನಿಂದ ಬಳಲುತ್ತಿತ್ತು. ಅಂದಿನಿಂದಲೂ ಚೀತಾವನ್ನು ತೀವ್ರ ವೈದ್ಯಕೀಯ ನಿಗಾದಲ್ಲಿ ಇಡಲಾಗಿತ್ತು. ಉಳಿದ ಚೀತಾಗಳು ಆರೋಗ್ಯವಾಗಿವೆ ಎಂದು ಕುನೊ ರಾಷ್ಟ್ರೀಯ ಅಭಯಾರಣ್ಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಚೀತಾ ಸಂತತಿ ಅವಸಾನ ಕಂಡಿದ್ದವು. ದೇಶದಲ್ಲಿ ಮತ್ತೆ ಚೀತಾ ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಚೀತಾಗಳನ್ನು ಮರುಪರಿಚಯಿಸುವ ಕಾರ್ಯಕ್ರಮವನ್ನು ರೂಪಿಸಿತ್ತು. ಅದರಂತೆ ನಮೀಬಿಯಾದಿಂದ ಒಟ್ಟು 8 ಚೀತಾಗಳನ್ನು ತಂದು ಮಧ್ಯಪ್ರದೇಶದ ಕುನೊ ನ್ಯಾಷನಲ್ ಪಾರ್ಕ್ಗೆ ಬಿಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಸೆಪ್ಟೆಂಬರ್ನಲ್ಲಿ ಈ ಚೀತಾಗಳನ್ನು ಅರಣ್ಯಕ್ಕೆ ಸೇರ್ಪಡೆ ಮಾಡಲಾಗಿತ್ತು.
ಸಾಶಾ ಚೀತಾದ ದೈನಂದಿನ ನಿಗಾವಣೆ ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣೆ ವೇಳೆ ಅದರಲ್ಲಿ ಆಯಾಸ ಹಾಗೂ ಬಲಹೀನತೆ ಕಂಡುಬಂದಿತ್ತು. ಆಕೆಯಲ್ಲಿ ನಿರ್ಜಲೀಕರಣ ಉಂಟಾಗಿದ್ದು, ಮೂತ್ರಪಿಂಡ ಸಂಬಂಧಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ರಕ್ತ ಪರೀಕ್ಷೆ ನಡೆಸಿದಾಗ ಅದರ ಕ್ರಿಯಾಟಿನ್ ಮಟ್ಟಗಳು ಬಹಳ ಅಧಿಕವಾಗಿದ್ದು, ಮೂತ್ರಪಿಂಡದಲ್ಲಿನ ಸೋಂಕನ್ನು ದೃಢಪಡಿಸಿತ್ತು. ಉದ್ಯಾನದಲ್ಲಿರುವ ಇತರೆ ಚೀತಾಗಳು ಆರೋಗ್ಯಯುತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆ. 17ರಂದು ಪ್ರಧಾನಿ ಮೋದಿ ಅವರ ಜನ್ಮದಿನದಂದು ಕುನೋ ಅರಣ್ಯಕ್ಕೆ ಸೇರ್ಪಡೆಗೊಳಿಸಿದ 5 ವರ್ಷದ ಎರಡು ಚೀತಾಗಳಲ್ಲಿ ಸಾಶಾ ಕೂಡ ಒಂದು