ಸ್ಯಾಟಲೈಟ್ (ಉಪಗ್ರಹ) ಆಧಾರಿತ ಎಲೆಕ್ಟ್ರಿಕ್ ಟೋಲ್ ವಸೂಲಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ, ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಬಂಧನೆ-2008ಕ್ಕೆ ತಿದ್ದುಪಡಿ ಮಾಡಿ ನೋಟಿಫಿಕೇಷನ್ ಜಾರಿ ಮಾಡಿದೆ. ಇದರ ಪ್ರಕಾರ, ಈಗಿರುವ ಟೋಲ್ಗಳಲ್ಲಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (GNSS) ಆಧಾರಿತ ಟೋಲ್ ಪದ್ದತಿ ಜಾರಿಗೆ ಬರಲಿದೆ.
ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂನ ಆನ್ ಬೋರ್ಡ್ ಯೂನಿಟ್ ಹೊಂದಿರುವ ವಾಹನಗಳು ಟೋಲ್ ಪ್ಲಾಜಾವನ್ನು ಕ್ರಾಸ್ ಮಾಡಿದಾಗ, ಪಯಣಿಸಿದ ದೂರಕ್ಕೆ ಅನುಗುಣವಾಗಿ ಆಟೋಮೆಟಿಕ್ ಆಗಿ ಟೋಲ್ ಶುಲ್ಕ ಪಾವತಿ ಆಗಲಿದೆ. ಒಬಿಯು ಅಳವಡಿಸಿಕೊಂಡ ವಾಹನಗಳಿಗೆ ಪ್ರತ್ಯೇಕ ಲೇನ್ ತೆರೆಯಲಾಗುತ್ತದೆ. ಮೊದಲ 20 ಕಿಮೀ ವರೆಗೂ ಜೀರೋ ಟೋಲ್ ಕಾರಿಡಾರ್ ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಅಂದ್ರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೊದಲ 20 ಕಿಲೋಮೀಟರ್ಗೆ ಟೋಲ್ ಪಾವತಿಸುವ ಅಗತ್ಯ ಇರುವುದಿಲ್ಲ. ನಂತರದ ಪಯಣಕ್ಕೆ ಅನುಗುಣವಾಗಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಮೊದಲಿಗೆ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್ಪ್ರೆಸ್ವೇಗಳಲ್ಲಿ ಈ ವಿಧಾನ ಜಾರಿಗೆ ತಂದು, ನಂತರ ದೇಶಾದ್ಯಂತ ಇದನ್ನು ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಅಂದ ಹಾಗೇ, ನ್ಯಾಷನಲ್ ಪರ್ಮಿಟ್ ಹೊಂದಿರುವ ವಾಹನಗಳನ್ನು ಈ ಪದ್ದತಿಯಿಂದ ಹೊರಗಿಡಲಾಗಿದೆ. ನ್ಯಾವಿಗೇಷನ್ ಡಿವೈಸ್ ಇಲ್ಲದ ವಾಹನಗಳಿಗೆ ಸಾಮಾನ್ಯ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಜಿಎನ್ಎನ್ಎಸ್ ಜಾರಿ ಬಗ್ಗೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇನಲ್ಲಿ ಪ್ರಾಯೋಗಿಕ ಅಧ್ಯಯನವನ್ನು ಕೇಂದ್ರ ಸರ್ಕಾರ ನಡೆಸಿತ್ತು.