ಬೆಂಗಳೂರು: ಕಾಂಗ್ರೆಸ್ ನೂತನ ಸರ್ಕಾರದ ಐತಿಹಾಸಿಕ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ ಎಂದು ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್ ಆಹ್ವಾನ ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಹಾಗೂ ಬೆಂಬಲ ನೀಡಿದ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಜನರ ಧ್ವನಿ ಕರ್ನಾಟಕ ಸರ್ಕಾರದ ಧ್ವನಿ. ಶನಿವಾರ ಸರ್ಕಾರದ ರಚನೆಯಾಗುತ್ತಿದೆ. ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕು, ಸ್ವಯಂಪ್ರೇರಿತರಾಗಿ ಎಲ್ಲರೂ ಬರಬೇಕಾಗಿದೆ ಎಂದರು.
11 ಗಂಟೆ ಒಳಗೆ ಎಲ್ಲರೂ ಕಂಠೀರವ ಕ್ರೀಡಾಂಗಣದ ಒಳಗೆ ಬರಬೇಕು. ನಮ್ಮ ಪಕ್ಷ ಮಾತ್ರವಲ್ಲ, ಬಿಜೆಪಿ, ಜೆಡಿಎಸ್ ನಾಯಕರು ಯಾವುದೇ ಅನ್ಯತಾ ಭಾವಿಸದೇ ಬರಬೇಕು ಎಂದು ಆಹ್ವಾನ ನೀಡಿದರು. ಸಂಪುಟ ರಚನೆ ವಿಚಾರವಾಗಿ ಮಾತನಾಡಿ, ಕ್ಯಾಬಿನೆಟ್ ನಲ್ಲಿ ಇರುವ ವ್ಯಕ್ತಿಗಳು ಯಾರು ಅಂತ ಹೇಳ್ತೀವಿ. ಊಹಾಪೋಹಗಳಿಗೆ ಅವಕಾಶವಿಲ್ಲ ಎಂದರು.
ಇಂದು ದೆಹಲಿಗೆ ಭೇಟಿ ನೀಡುತ್ತಿದ್ದೇನೆ
ಮೊದಲ ಹಂತದ ಕ್ಯಾಬಿನೆಟ್ ರಚನೆಗೆ ಚರ್ಚೆ ಮಾಡ್ತೀವಿ. ಗ್ಯಾರೆಂಟಿ ಯೋಜನೆಗೆ ಷರತ್ತು ವಿಧಿಸುತ್ತೀರಾ ಎಂಬ ಪ್ರಶ್ನೆಗೆ, ಈಗ ಏನು ಮಾತನಾಡಲ್ಲ. ಆದರೆ ನುಡಿದಂತೆ ನಡೆಯುತ್ತೇವೆ. ಕಾಂಗ್ರೆಸ್ ಪಕ್ಷದ ಒಮ್ಮತದ ಗ್ಯಾರೆಂಟಿ. ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದರು.
ಕಂಠೀರವ ಕ್ರಿಡಾಂಗಣದಲ್ಲಿ ಒಟ್ಟು ಮೂರು ವೇದಿಕೆಗಳು ತಯಾರಾಗಿದ್ದು,ಜನರಿಗೆ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಣೆಗೆ ಎಲ್ ಇ ಡಿ ಪರದೆಯನ್ನು ಅಳವಡಿಸಲಾಗಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಘಟಾನುಘಟಿ ನಾಯಕರೆಲ್ಲರೂ ಭಾಗಿಯಾಗಲಿದ್ದಾರೆ.
ಯಾರೆಲ್ಲಾ ಭಾಗಿ
ಶನಿವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್, ಹಿಮಾಚಲ ಪ್ರದೇಶ ಸಿಎಂ ಸುಕ್ವಿಂದರ್ ಸಿಂಗ್, ಪುದುಚೇರಿ ಸಿಎಂ ಎಂ ರಂಗಸ್ವಾಮಿ ಹಾಗೂ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಭಾಗಿಯಾಗಲಿದ್ದಾರೆ.
ಕರ್ನಾಟಕದ ಚುನಾವಣಾ ಫಲಿತಾಂಶ ಪ್ರಕಟವಾದ ಆರು ದಿನಗಳ ನಂತರ ಸಿಎಂ, ಡೆಪ್ಯುಟಿ ಸಿಎಂ ಅಧಿಕಾರಿ ವಹಿಸಿಕೊಳ್ಳುತ್ತಿದ್ದಾರೆ. ಸಿಎಂ ಆಯ್ಕೆ ವಿಚಾರ ಕಗ್ಗಂಟಾದ ಹಿನ್ನೆಲೆ, ಹೈಕಮಾಂಡ್ ಮಟ್ಟದಲ್ಲಿ ಇಷ್ಟು ದಿನ ಚರ್ಚೆ,ಸ ಭೆಗಳು ನಡೆದಿದ್ದವು. ಕಡೆಗೂ ಸಿದ್ದರಾಮಯ್ಯ ಸಿಎಂ ಆಗಿ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.