ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಸಂಕಷ್ಟ ಬೆಂಬಿಡದಂತೆ ಕಾಣ್ತಿದೆ. ಸ್ವಾತಂತ್ರ್ಯ ಹೋರಾಟಗಾರ ವಿ.ಡಿ ಸಾವರ್ಕರ್ (VD Savarkar) ಅವರ ಮೊಮ್ಮಗ, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಈ ಹಿಂದೆ ರಾಹುಲ್ ಗಾಂಧಿ ಲಂಡನ್ಗೆ ತೆರಳಿದ್ದಾಗ ತಮ್ಮ ಭಾಷಣದಲ್ಲಿ ವಿ.ಡಿ ಸಾವರ್ಕರ್ ವಿರುದ್ಧ ತಪ್ಪು ಆರೋಪ ಮಾಡಿದ್ದಾರೆ ಎಂಬುದಾಗಿ ಈ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಮೊಮ್ಮಗ ಸತ್ಯಕಿ ಸಾವರ್ಕರ್ (Satyaki Savarkar) ತಿಳಿಸಿದ್ದಾರೆ. ಸತ್ಯಕಿ ಪರ ವಕೀಲರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ (IPC) ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೋರ್ಟ್ ಅಧಿಕಾರಿ ಇಂದು ಗೈರು ಹಾಜರಾಗಿದ್ದ ಕಾರಣ ಪ್ರಕರಣದ ಸಂಖ್ಯೆ ಪಡೆಯಲು ಶನಿವಾರ ಆಗಮಿಸುವಂತೆ ಸೂಚಿಸಲಾಗಿದೆ ಇನ್ನೂ ಕೇಸ್ ಸಂಖ್ಯೆ ಸಿಕ್ಕಿಲ್ಲ ಎಂದು ಸತ್ಯಕಿ ಸಾವರ್ಕರ್ ಹೇಳಿದ್ದಾರೆ.
ರಾಗಾ ಹೇಳಿದ್ದೇನು?
ಲಂಡನ್ ನಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿಯವರು ಸಾವರ್ಕರ್ ವಿಷಯ ಪ್ರಸ್ತಾಪಿಸಿದ್ದರು. ʻತಾವು ಹಾಗೂ ತಮ್ಮ 5-6 ಮಂದಿ ಸ್ನೇಹಿತರು ಸೇರಿ ಓರ್ವ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದೆವು ಆಗ ತಮಗೆ ಸಂತೋಷವಾಗಿತ್ತುʼ ಎಂದು ಸಾವರ್ಕರ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿರುವುದಾಗಿ ರಾಹುಲ್ ಗಾಂಧಿ ಸಭೆಗೆ ತಿಳಿಸಿದ್ದಾರೆ.
2019ರ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ (Kolara) ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಸೂರ್ ಜಿಲ್ಲಾ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತು. 2 ವರ್ಷ ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು.