ತೆಲುಗಿನ ಖ್ಯಾತ ನಟ ಸಯಾಜಿ ಶಿಂಧೆ ಎದೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಏಪ್ರಿಲ್ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ನಟನಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದ್ದು, ಅವರ ಹೃದಯದಲ್ಲಿ ಬ್ಲಾಕೇಜ್ ಇದೆ ಎನ್ನುವ ವಿಚಾರ ಗೊತ್ತಾಗಿದೆ. ವೈದ್ಯರು ಆ್ಯಂಜಿಯೋಪ್ಲಾಸ್ಟಿ ಮಾಡಿದ್ದು, ಸಯಾಜಿ ಚೇತರಿಸಿಕೊಳ್ಳುತ್ತಿದ್ದಾರೆ.
ಸಯಾಜಿ ಆಸ್ಪತ್ರೆಗೆ ದಾಖಲಾದ ವಿಚಾರ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ವಿಡಿಯೋ ಒಂದನ್ನು ಮಾಡಿ ಪೋಸ್ಟ್ ಮಾಡಿದ್ದರು. ‘ನಾನು ಆರೋಗ್ಯವಾಗಿದ್ದೇನೆ. ನನ್ನ ಬಗ್ಗೆ ಕಾಳಜಿವಹಿಸುವ ಎಲ್ಲಾ ಅಭಿಮಾನಿಗಳು ಚಿಂತಿಸೋದು ಬೇಡ. ನಾನು ಶೀಘ್ರವೇ ನಿಮ್ಮನ್ನು ಮನರಂಜಿಸುತ್ತೇನೆ’ ಎಂದಿದ್ದಾರೆ ಸಯಾಜಿ.
ಇತ್ತೀಚೆಗೆ ಸಯಾಜಿ ಅವರಿಗೆ ಅನಾರೋಗ್ಯ ಕಾಡಿತ್ತು. ಈಗ ಅವರಿಗೆ ಎದೆನೋವು ಕೂಡ ಕಾಣಿಸಿಕೊಂಡಿರುವುದರಿಂದ ಕುಟುಂಬದವರು ಆತಂಕಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಹೃದಯಕ್ಕೆ ಸಂಬಂಧಿಸಿದ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಅವರ ಹೃದಯ ರಕ್ತನಾಳದಲ್ಲಿ ಶೇ.99 ಬ್ಲಾಕೇಜ್ ಇರುವ ವಿಚಾರ ಗೊತ್ತಾಗಿದೆ. ಸದ್ಯ ಅವರ ಆರೋಗ್ಯ ಸುಧಾರಿಸಿದೆ. ಅವರನ್ನು ಎರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.