ಹೈಸ್ಕೂಲ್ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಕೆಲ ಕಾರುಗಳು ಮತ್ತು ಮೂರು ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಜಾವಾ ದ್ವೀಪದಲ್ಲಿ ನಡೆದಿದೆ.
ಅಪಘಾತ ಸಂಭವಿಸಿದಾಗ ಶಾಲಾ ಬಸ್ನಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದರು. ಈ ಬಸ್ ಜಾವಾ ದ್ವೀಪದ ಪಟ್ಟಣವಾದ ಡಿಪೋಕ್ನಿಂದ ಜನಪ್ರಿಯ ಪ್ರವಾಸಿ ತಾಣವಾದ ಲೆಂಬಾಂಗ್ಗೆ ಪ್ರವಾಸಕ್ಕೆ ಬಂದಿದ್ದರು. ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಪ್ರವಾಸದಿಂದ ಹಿಂದಿರುಗಿ ಕರೆದುಕೊಂಡು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಶನಿವಾರ ಸಂಜೆ 6.48ಕ್ಕೆ ಈ ದುರ್ಘಟನೆ ನಡೆದಿದೆ ಎಂದು ಪಶ್ಚಿಮ ಜಾವಾ ಪೊಲೀಸ್ ವಕ್ತಾರ ಜೂಲ್ಸ್ ಅಬ್ರಹಾಂ ಅಬಾಸ್ಟ್ ಹೇಳಿದ್ದಾರೆ.
ಇಳಿಜಾರಿನ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಬಸ್ನ ನಿಯಂತ್ರಣ ತಪ್ಪಿ ಲೇನ್ಗಳನ್ನು ದಾಟಿ ಹಲವಾರು ಕಾರುಗಳು ಮತ್ತು ಮೋಟಾರ್ಬೈಕ್ಗಳಿಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿತು. ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಶಿಕ್ಷಕ ಮತ್ತು ಸ್ಥಳೀಯ ವಾಹನ ಚಾಲಕ ಸೇರಿದಂತೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು 53 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಅದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬಸ್ನ ಬ್ರೇಕ್ಗಳು ಫೇಲ್ ಆಗಿದ್ದವು ಎಂದು ಅನುಮಾನ ಮೂಡಿದೆ ಎಂದು ಅಬಾಸ್ಟ್ ತಿಳಿಸಿದ್ದಾರೆ.