ಬೆಂಗಳೂರು: ಶಾಲಾ ಪಠ್ಯಪುಸ್ತಕ ಮುದ್ರಣದಲ್ಲಿಯೂ ಪರ್ಸಂಟೇಜ್ ದಂಧೆ ನಡೆಯುತ್ತಿದೆ. ಮುದ್ರಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಪ್ರಾಥಮಿಕ ಪ್ರೌಡಶಿಕ್ಷಣ ಇಲಾಖೆಯಲ್ಲಿ ಪ್ರತಿವರ್ಷ ಪಠ್ಯ ಪುಸ್ತಕ ಮುದ್ರಣ ಮಾಡಲಾಗುತ್ತದೆ. ಈಗ ದಕ್ಷಿಣ ಭಾರತದ ಎಲ್ಲಾ ಮುದ್ರಣ ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಕ್ಕೆ ಅವಕಾಶ ಕೊಡಲಾಗಿದೆ.
ರಾಜ್ಯದವರಿಗೆ ನೀಡದೇ ಇತರೆ ಮುದ್ರಕರು ಟೆಂಡರ್ ನಲ್ಲಿ ಪಾಲ್ಗೊಳ್ಳುವಂತೆ ಮಾಡಿ ವ್ಯಾಪಾರ ಮಾಡುತ್ತಾರೆ. ಒಬ್ಬ ಮುದ್ರಕ ಹೇಳಿದನಂತೆ, ಸ್ವಲ್ಪ ಬಿಗಿ ಮಾಡಿಕೊಳ್ಳಿ. 10% ಅಲ್ಲ15% ಕೊಡುತ್ತಾರೆ ಎಂದು. ಇದು ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆಯುತ್ತಿರುವುದು. ಪ್ರಶ್ನೆ ಮಾಡಿದರೆ ಕುಮಾರಸ್ವಾಮಿ ಭ್ರಮನೀರಸಗೊಂಡಿದ್ದಾನೆ ಅಂತಾರೆ. ಏನು ಮಾಡಲಿ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಗುತ್ತಿಗೆದಾರರ ಬಳಿ ಕಮೀಷನ್ ಕಿತ್ತು ತಿನ್ನಲಾಗುತ್ತಿದೆ. ಈಗ ಅವರು ಪುಸ್ತಕ ಮುದ್ರಕರನ್ನೂ ಬಿಡುತ್ತಿಲ್ಲ ಎಂದು ಅವರು ಟೀಕಿಸಿದರು.
ಅಲ್ಪಸಂಖ್ಯಾತರ ಹೆಸರಿನಲ್ಲೂ ಕೊಳ್ಳೆ
ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ಅನುದಾನದ ವಿಚಾರದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು; ಅದು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವಲ್ಲ. ಕಮೀಷನ್ ಹೊಡೆಯಲು ದಂಧೆಗೆ ಉಪಯೋಗಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಈ ಅನುದಾನದ ನಾಟಕವಷ್ಟೇ. ಅವರಿಗೆ ಪರ್ಸಂಟೇಜ್ ಎಷ್ಟು ಬರುತ್ತೆ ಎಂಬುದು ಜಗಜ್ಜಾಹಿರಾಗಿದೆ. ಅವರನ್ನು ಓಲೈಸಿಕೊಳ್ಳಲು ಹಾಗೂ ಅವರ ಹಿಂದೆ ನಿಂತುಕೊಳ್ಳುವವರ ಸಂತೃಪ್ತಿಗಾಗಿ ಈ ಹಣ ಮೀಸಲಿಟ್ಟಿದ್ದಾರೆಯೇ ಹೋರತು ಸಮುದಾಯದ ಅಭಿವೃದ್ಧಿಗಾಗಿ ಅಲ್ಲ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಕೆಲವರನ್ನ ಖುಷಿಪಡಿಸಲು, ತಾತ್ಕಾಲಿಕವಾಗಿ ಈ ರೀತಿಯ ಘೋಷಣೆ ಮಾಡುತ್ತಾರೆ. ಅದು ಯಾವುದು ಜಾರಿಗೆ ಬರೊದಿಲ್ಲ. ಹಿಜಾಬ್ ವಿಚಾರವಾಗಿ ಮೈಸೂರಿನಲ್ಲಿ ಹೇಳಿಕೆ ನೀಡಿ ಪುನಾ ವಾಪಸ್ ಪಡೆದರು. ಹುಬ್ಬಳ್ಳಿಯಲ್ಲಿ ಮುಸ್ಲೀಮರಿಗೆ 10,000 ಕೋಟಿ ರೂ. ಅನುದಾನ ಕೊಡುತ್ತೇವೆ ಎಂದು ಹೇಳಿದರು. ಅವರ ಬಳಿ ಹಣ ಎಲ್ಲಿದೆ? ಅವರ ಹಿಂದೆ ಇರುವವರನ್ನು ಉದ್ಧಾರ ಮಾಡಲು ಹಣ ಕೊಡುತ್ತಿದ್ದಾರೆ ಅಷ್ಟೇ ಎಂದು ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.