ತುಮಕೂರು: ಕೇಂದ್ರ ಸಚಿವ ವಿ.ಸೋಮಣ್ಣರ ತುಮಕೂರು ಕಾರ್ಯಾಲಯದ ವಿವಾದ ಕೊನೆಗೂ ಸುಖಾಂತ್ಯಗೊಂಡಿದೆ. ಆಡಳಿತಾತ್ಮಕ ಒಪ್ಪಿಗೆಯೊಂದಿಗೆ ಭಾನುವಾರ ವಿದ್ಯುಕ್ತವಾಗಿ ನೂತನ ಕಚೇರಿ ಉದ್ಘಾಟನೆಗೊಂಡಿದೆ. ಮೈತ್ರಿ ಪಕ್ಷದ ಸಾವಿರಾರು ಕಾರ್ಯಕರ್ತರು, ಮುಖಂಡರ ಜಮಾವಣೆಯೊಂದಿಗೆ ಶಕ್ತಿ ಪ್ರದರ್ಶನ ಮಾಡಿ ನೂತನ ಕಾರ್ಯಾಲಯ ಆರಂಭಗೊಂಡಿದೆ.
ತುಮಕೂರಿನ ಹಳೇ ಪ್ರವಾಸಿ ಮಂದಿರದಲ್ಲಿ ಕಾರ್ಯಾಲಯ ಆರಂಭಿಸಲು ರಾಜ್ಯ ಸರ್ಕಾರ ಮೊದಲು ಅನುಮತಿ ಕೊಟ್ಟಿತ್ತು. ನವೀಕರಣಗೊಂಡು ಉದ್ಘಾಟನೆಗೆ ಸಿದ್ಧಗೊಂಡ ಬಳಿಕ ಅನುಮತಿ ರದ್ದುಗೊಳಿಸಿತ್ತು. ಸರ್ಕಾರದ ಈ ಧೋರಣೆಗೆ ಮೈತ್ರಿ ನಾಯಕರು ಕೆಂಡಾಮಂಡಲವಾಗಿದ್ದರು. ಈ ನಡುವೆ ಸ್ವತಃ ಸಿಎಂ ಸಿದ್ದರಾಮಯ್ಯ ವಿ.ಸೋಮಣ್ಣರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.
ಬಳಿಕ ಸಿಎಂ ಸಲಹೆ ಮೇರೆಗೆ ವಿ.ಸೋಮಣ್ಣ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಗೊಂದಲ ಪರಿಹರಿಸಿದ್ದಾರೆ. ಹೀಗಾಗಿ ಯಾವುದೇ ಅಡ್ಡಿ ಆತಂಕ ಇಲ್ಲದೇ ಭಾನುವಾರ ಸುಸೂತ್ರವಾಗಿ ಕಚೇರಿ ಉದ್ಘಾಟನೆ ನಡೆದಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿ ಮಂದಿರದ ಸುತ್ತಲೂ ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು.