ನವದೆಹಲಿ: ‘ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದ’ ಹೆಸರಿನಲ್ಲಿ ಸ್ವೀಟ್ಸ್ ಮಾರಾಟ ಮಾಡುತ್ತಿರುವ ಆರೋಪದ ಮೇಲೆ ಆನ್ಲೈನ್ ಶಾಪಿಂಗ್ ಸಂಸ್ಥೆಯೊಂದಕ್ಕೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಇನ್ನೂ ಆಗಿಲ್ಲ.
ಈ ಹೊತ್ತಿನಲ್ಲಿ ರಾಮಮಂದಿರದ ಪ್ರಸಾದ ಎಂದು ಹೇಳಿಕೊಂಡು ಸ್ವೀಟ್ಸ್ ಮಾರಾಟ ಮಾಡುವ ಮೂಲಕ ಗ್ರಾಹಕರ ದಾರಿ ತಪ್ಪಿಸಲಾಗುತ್ತಿದೆ ಎಂದು ಆನ್ಲೈನ್ ಶಾಪಿಂಗ್ ಸಂಸ್ಥೆಯೊಂದರ ವಿರುದ್ಧ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ದೂರು ನೀಡಿತ್ತು. ಈ ಸಂಬಂಧ ಸಂಸ್ಥೆಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ಇಂತಹ ಕ್ರಮಗಳು ಗ್ರಾಹಕರನ್ನು ತಪ್ಪುದಾರಿಗೆಳೆಯುತ್ತವೆ.
ಗ್ರಾಹಕರ ಖರೀದಿ ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತವೆ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಎಚ್ಚರಿಸಿದೆ.ಆನ್ಲೈನ್ ಶಾಪಿಂಗ್ ಸಂಸ್ಥೆಗೆ ಸಿಸಿಪಿಎ ನೋಟಿಸ್ ನೀಡಿದ್ದು, 7 ದಿನಗಳ ಒಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ. ಇಲ್ಲದಿದ್ದರೆ, ಗ್ರಾಹಕ ಸಂರಕ್ಷಣಾ ಕಾಯ್ದೆ,-2019 ರ ನಿಬಂಧನೆಗಳ ಅಡಿಯಲ್ಲಿ ಕಂಪನಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.