ಕನ್ನಡದ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಹಿರಿಯ ನಿರ್ಮಾಪಕ ಕೆ. ಪ್ರಭಾಕರ್ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಕೊನೆಯುಸಿರು ಎಳೆದಿದ್ದಾರೆ. ಪ್ರಭಾಕರ್ ಅವರಿಗೆ ಹೃದಯಾಘಾತವಾಗಿದ್ದು ತಕ್ಷಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ಕೆ. ಪ್ರಭಾಕರ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸಭ್ಯ ನಿರ್ಮಾಪಕ ಎಂದು ಕೆ. ಪ್ರಭಾಕರ್ ಅವರು ಗುರುತಿಸಿಕೊಂಡಿದ್ದಾರೆ. ಅನೇಕ ಖ್ಯಾತ ಕಲಾವಿದರ ಜೊತೆ ಉತ್ತಮ ಬಾಂದವ್ಯ ಹೊಂದಿದ್ದರು. ಕಾಶಿನಾಥ್, ಶಿವರಾಜ್ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ರಾಧಿಕಾ ಕುಮಾರಸ್ವಾಮಿ ಮುಂತಾದ ಕಲಾವಿದರ ಸಿನಿಮಾಗಳಿಗೆ ಕೆ. ಪ್ರಭಾಕರ್ ಅವರು ಬಂಡವಾಳ ಹೂಡಿದ್ದರು. ಹಲವು ಸಿನಿಮಾಗಳ ಮೂಲಕ ಹೆಸರು ಮಾಡಿದ್ದ ಪ್ರಭಾಕರ್ ನಿಧನ ಚಿತ್ರರಂಗಕ್ಕೆ ತೀವ್ರ ನೋವುಂಟು ಮಾಡಿದೆ.
ಕಾಶಿನಾಥ್-ಭವ್ಯ ನಟನೆಯ ‘ಅವಳೇ ನನ್ನ ಹೆಂಡ್ತಿ’, ವಿಷ್ಣುವರ್ಧನ್-ಪ್ರೇಮಾ ಅಭಿನಯದ ‘ಎಲ್ಲರಂಥಲ್ಲ ನನ್ನ ಗಂಡ’, ಶಿವರಾಜ್ಕುಮಾರ್-ರಾಧಿಕಾ ಕುಮಾರಸ್ವಾಮಿ ನಟಿಸಿದ ‘ಅಣ್ಣ-ತಂಗಿ’, ಉಪೇಂದ್ರ-ಶಿವರಾಜ್ಕುಮಾರ್ ಒಟ್ಟಾಗಿ ಅಭಿನಯಿಸಿದ ‘ಲವ-ಕುಶ’ ಮುಂತಾದ ಸಿನಿಮಾಗಳನ್ನು ಕೆ. ಪ್ರಭಾಕರ್ ಅವರು ನಿರ್ಮಾಣ ಮಾಡಿದ್ದರು. ಪರಭಾಷೆಯ ಸಿನಿಮಾಗಳನ್ನು ಕೂಡ ಅವರು ನಿರ್ಮಿಸಿದ್ದರು.
ಅಷ್ಟೇ ಅಲ್ಲದೇ, ವಿಷ್ಣುವರ್ಧನ್ ನಟನೆಯ ‘ತುಂಬಿದ ಮನೆ’, ಅಂಬರೀಷ್-ಮಾಲಾಶ್ರೀ ಅಭಿನಯದ ‘ಸೋಲಿಲ್ಲದ ಸರದಾರ’ ಮುಂತಾದ ಚಿತ್ರಗಳಿಗೂ ಕೆ. ಪ್ರಭಾಕರ್ ಅವರು ಹಣ ಹೂಡಿದ್ದರು. ಕೌಟುಂಬಿಕ ಪ್ರೇಕ್ಷಕರನ್ನು ರಂಜಿಸುವಂತಹ ಸಿನಿಮಾಗಳನ್ನು ಮಾಡಿ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಸ್ಯಾಂಡಲ್ವುಡ್ನಲ್ಲಿ ಅನುಭವಿ ನಿರ್ಮಾಪಕನಾಗಿದ್ದ ಪ್ರಭಾಕರ್ ಅವರಿಗೆ 64 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.