ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಟಿಕೆಟ್ಗೆ ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ ನೀಡಿರುವ ಆಫರ್ಗಳನ್ನೆಲ್ಲಾ ತಿರಸ್ಕರಿಸಿ ಚುನಾವಣೆಗೆ ಸ್ಪರ್ಧಿಸುವ ಬೇಡಿಕೆಯೊಂದನ್ನೆ ಮುಂದಿಟ್ಟಿದ್ದಾರೆ. ಶೆಟ್ಟರ್ ನಡೆ ಬಿಜೆಪಿಗೆ ನುಂಗಲಾರದ ತುಪ್ಪದಂತಾಗಿ ಪರಿಣಮಿಸಿದೆ. ಬಿಜೆಪಿಯ ಬೆಳವಣಿಗೆಯ ಲಾಭ ಪಡೆಯಲು ಸಜ್ಜಾಗಿರುವ ಕೈ ಪಡೆ ಶೆಟ್ಟರ್ಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಲು ಸಜ್ಜಾಗಿದೆ.
ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆರು ಬಾರಿ ಗೆದ್ದಿರುವ ಜಗದೀಶ್ ಶೆಟ್ಟರ್ ಏಳನೆ ಬಾರಿ ಕೂಡ ಪಕ್ಷದ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಬೇರಿಯವರಿಗೆ ಅವಕಾಶ ಕೊಡುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಟಿಕೆಟ್ ಕೊಡಲಿ ಕೊಡದಿರಲಿ ಸ್ಪರ್ಧೆ ಖಚಿತ ಎಂದಿರುವ ಶೆಟ್ಟರ್ ಪಟ್ಟು ಸಡಿಲಿಸಿಲ್ಲ. ಹೀಗಾಗಿ ಶೆಟ್ಟರ್ ನಿವಾಸಕ್ಕೆ ದೌಡಾಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮನವೊಲಿಸಲು ಯತ್ನಿಸಿದ್ದಾರೆ. ರಾಜ್ಯಪಾಲ ಮಾಡುವ ಆಫರ್ ನೀಡಿದ್ರು ಶೆಟ್ಟರ್ ಒಪ್ಪಿಲ್ಲ. ಹುಬ್ಬಳ್ಳಿಯ ಮಧುರಾ ಎಸ್ಟೇಟ್ನ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ ಜಗದೀಶ್ ಶೆಟ್ಟರ್ ಬೆಂಬಲಿಗರಿಂದ ಸಲಹೆ ಸೂಚನೆ ಕೇಳಿದ್ದಾರೆ. ಬೆಂಬಲಿಗರು ಕೂಡ ಶೆಟ್ಟರ್ ನಿರ್ಧಾರಕ್ಕೆ ಬದ್ಧವಾಗಿ ಇರುವ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ಶೆಟ್ಟರ್ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಭ್ರಷ್ಟಾಚಾರ ಆರೋಪ, ಸಿಡಿ, ಐಟಿ, ಇಡಿ ಏನಾದರೂ ಆರೋಪ ಶೆಟ್ಟರ್ ಮೇಲೆ ಇದ್ದಾವಾ? ಪಕ್ಷ ತಿಳಿಸಲಿ ಎಂದು ಸವಾಲ್ ಹಾಕಿದ್ದಾರೆ.
ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಒಬ್ಬ ಶಾಸಕನಾಗಿ ಕೆಲಸ ಮಾಡಲು ಇನ್ನೂ ಅವಕಾಶವಿದೆ. ಶೆಟ್ಟರ್ಗೆ ಟಿಕೆಟ್ ಇಲ್ಲಾ ಅನ್ನೋ ವಾತಾವರಣ ಯಾಕೆ ಬಂತು ಗೊತ್ತಿಲ್ಲ. ಯಾವುದೇ ಕಳಂಕ ನನ್ನ ಮೇಲೆ ಇಲ್ಲಾ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸಿ, ಶಕ್ತಿ ಕೊಡುವ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಕೊಟ್ಟಿರುವ ಅವಕಾಶಕ್ಕೆ ಧನ್ಯವಾದ ಹೇಳುತ್ತೇನೆ. ಅಪೂರ್ಣ ಕೆಲಸ ಪರಿಪೂರ್ಣ ಮಾಡಲು ಮತ್ತೊಂದು ಅವಕಾಶ ಕೊಡಬೇಕು. ಸಾಯಂಕಾಲದವರೆಗೆ ಕಾಯ್ದು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಶೆಟ್ಟರ್ ಮಾರ್ಮಿಕವಾಗಿ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಶೆಟ್ಟರ್ ಆಪ್ತರು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಂಪರ್ಕದಲ್ಲಿದ್ದು, ಸಂಜೆಹೊತ್ತಿಗೆ ಬಿಜೆಪಿ ತೊರೆಯುವ ಘೋಷಣೆ ಮಾಡಲಿದ್ದಾರೆ ಎನ್ನುವ ಮಾತು ಕೇಳಲಾರಂಬಿಸಿದ್ದು, ಎಷ್ಟರಮಟ್ಟಿಗೆ ಸತ್ಯವೋ ಜಗದೀಶ್ ಶೆಟ್ಟರ್ ನಿರ್ಧಾರದ ನಂತರವೇ ಗೊತ್ತಾಗಲಿದೆ.