ಬೆಂಗಳೂರು: ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಶನಿವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ತಾವು ಪುಲಕೇಶಿನಗರದಿಂದ ಸ್ಪರ್ಧಿಸುವ ಬಗ್ಗೆ ಹಾಗೂ ಇತರರ ಹೆಸರು ಈ ಕ್ಷೇತ್ರದಿಂದ ಕೇಳಿಬರುತ್ತಿರುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅತ್ಯಂತ ಮುಖ್ಯವಾಗಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಗೂ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಪುಲಕೇಶಿನಗರಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೇ ಆತಂಕಕ್ಕೆ ಒಳಗಾಗಿರುವ ಅಖಂಡ ನೇರವಾಗಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್, ಮಾಜಿ ಮೇಯರ್ ಸಂಪತ್ರಾಜ್ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿದೆ.
ಈ ಮಧ್ಯೆ ಇನ್ನಷ್ಟು ಹೆಸರು ಸೇರುತ್ತಿರುವುದು ಅಖಂಡ ಶ್ರೀನಿವಾಸಮೂರ್ತಿಗೆ ಆತಂಕ ತರಿಸಿದೆ. ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ನಮ್ಮ ನಾಯಕರು ಸಿದ್ದರಾಮಯ್ಯ. ಹೀಗಾಗಿ ಅವರನ್ನು ಭೇಟಿಮಾಡಲು ಬಂದಿದ್ದೆ. ನನಗೆ ವಿಶ್ವಾಸವಿದೆ ನನಗೆ ಟಿಕೆಟ್ ಸಿಗುತ್ತೆ ಅಂತ. ಸಿದ್ದರಾಮಯ್ಯ, ಜಮೀರ್ ಅಹ್ಮದ್ ನನ್ನ ಪರವಾಗಿ ಇದ್ದಾರೆ. 2018ರಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದಿದ್ದೆ. ಈ ಬಾರಿ ಕೂಡ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ. ಪಕ್ಷ ಅಂದ ಮೇಲೆ ಎಲ್ಲರೂ ಟಿಕೆಟ್ ಕೇಳುತ್ತಾರೆ. ಹಿರಿಯ ನಾಯಕರು ಯಾರು ಪುಲಕೇಶಿ ನಗರ ಟಿಕೆಟ್ ಬಯಸಿಲ್ಲ. ಟಿಕೆಟ್ ನನಗೆ ಸಿಕ್ಕೆ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.