ಆಫ್ರಿಕಾ ಖಂಡದ ದಕ್ಷಿಣ ಭಾಗದ ದೇಶಗಳು ಭೀಕರ ಬರಗಾಲ ಎದುರಿಸುತ್ತಿವೆ. ಯಾವ ಮಟ್ಟಿಗೆ ಎಂದರೆ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಜನರು ಹಸಿವಿನಿಂದ ಒದ್ದಾಡಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಹಸಿವು ನೀಗಿಸುವ ಉದ್ದೇಶದಿಂದ ಇದೀಗ ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ನೂರಾರು ಕಾಡಾನೆಗಳು ಹಾಗು ಇತರೆ ಪ್ರಾಣಿಗಳ ಹತ್ಯೆಗೆ ನಿರ್ಧಾರ ಕೈಗೊಂಡಿವೆ.
ಕಾಡಾನೆಗಳು ಹಾಗೂ ಇತರೆ ಪ್ರಾಣಿಗಳ ಮಾಂಸದಿಂದ ಜನರ ಹಸಿವು ನೀಗಿಸಲು ಮುಂದಾಗಿವೆ. ನಾವು ಸುಮಾರು 200 ಆನೆಗಳನ್ನು ಕೊಲ್ಲುತ್ತೇವೆ. ಅವುಗಳ ಮಾಂಸವನ್ನು ಅವಶ್ಯವಿರುವ ಸಮುದಾಯಗಳ ಜನರಿಗೆ ಹಂಚುತ್ತೇವೆ” ಎಂದು ಜಿಂಬಾಬ್ವೆ ತಿಳಿಸಿದೆ. ಇದೇ ರೀತಿ ನಮೀಬಿಯಾ ದೇಶ ಕೂಡಾ ವಾರದ ಹಿಂದೆ ಇಂಥದ್ದೇ ಕ್ರಮಕ್ಕೆ ಮುಂದಾಗಿತ್ತು. 700ಕ್ಕೂ ಹೆಚ್ಚು ಕಾಡುಪ್ರಾಣಿಗಳನ್ನು ಕೊಲ್ಲಲು ನಿರ್ಧರಿಸಿದ್ದು ಅವುಗಳಲ್ಲಿ 83 ಆನೆಗಳನ್ನು ಕೊಲ್ಲುವ ಕಾರ್ಯ ಆರಂಭವಾಗಿದೆ.
1.63 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಜಿಂಬಾಬ್ವೆ ದೇಶದಲ್ಲಿ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಜೊತೆಗೆ 55,000 ಆನೆಗಳಿಗೆ ಆಶ್ರಯ ಒದಗಿಸಬಲ್ಲ ನಮ್ಮ ದೇಶದಲ್ಲಿ ಪ್ರಸ್ತುತ 84,000 ಆನೆಗಳಿದ್ದು, ಆನೆಗಳ ಸಂಖ್ಯೆಯಲ್ಲಿ ಜಿಂಬಾಬ್ವೆ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ ಎನ್ನುವ ಮೂಲಕ ಆನೆ ಹತ್ಯೆ ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ಒಣಗಿಸಿ ಪ್ರೋಟೀನ್ ಅವಶ್ಯಕತೆ ಇರುವವರಿಗೆ ಕೊಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಜಿಂಬಾಬ್ವೆ ಪರಿಸರ ಸಚಿವ ಸಿತೆಂಬಿಸೋ ನಿಯೋನಿ ಹೇಳಿದ್ದಾರೆ. ಪ್ರತಿ 5 ವರ್ಷಗಳಿಗೊಮ್ಮೆ ಆನೆ ಗಣತಿಯನ್ನು ನಡೆಸಲಾಗುತ್ತದೆ. 2021ರ ಆನೆ ಗಣತಿ ವರದಿ ಪ್ರಕಾರ ಜಿಂಬಾಬ್ವೆ 1 ಲಕ್ಷ ಆನೆಗಳನ್ನು ಹೊಂದಿದ್ದು, ವಿಶ್ವಕ್ಕೆ 2ನೇ ಸ್ಥಾನದಲ್ಲಿತ್ತು.