ಬೆಂಗಳೂರು ; ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಲೈಂಗಿಕ ಕಾರ್ಯಕರ್ತೆಯ ಮೇಲೆ ಮೂವರು ಆರೋಪಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಜರುಗಿದೆ.
ಲೈಂಗಿಕ ಕಾರ್ಯಕರ್ತೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಮೆಜೆಸ್ಟಿಕ್ ಬಳಿ ಇರುವ ಎಟಿಎಂ ಕಿಯೋಸ್ಕ್ ಬಳಿ ಗ್ರಾಹಕರಿಗಾಗಿ ಕಾದು ನಿಂತಿದ್ದಳು. ಈ ವೇಳೆ ಮೂವರು ಯುವಕರು ಮಹಿಳೆ ಬಳಿ ಬಂದಿದ್ದಾರೆ. ಆದರೆ, ಮೂವರು 20 ವರ್ಷದೊಳಗಿನ ಯುವಕರಾಗಿದ್ದರಿಂದ ಮಹಿಳೆ ನಿರಾಕರಿಸಿದ್ದಾರೆ. ಬಳಿಕ ಟೀ ಕುಡಿಯಲು ತೆರಳಿದ ಮಹಿಳೆ ಮತ್ತೊಬ್ಬ ಲೈಂಗಿಕ ಕಾರ್ಯಕರ್ತೆ ಜೊತೆಗೆ ಸ್ಥಳಕ್ಕೆ ಬಂದಿದ್ದಾರೆ.
ಜೊತೆಗೆ ಬಂದಿದ್ದ ಮತ್ತೊಬ್ಬ ಮಹಿಳೆಯನ್ನೂ ಯುವಕರು ಸಂಪರ್ಕಿಸಿದ್ದು, ಅವರೂ ಕೂಡ ನಿರಾಕರಿಸಿದ್ದಾರೆ. ಇದರಿಂದ ಕೆಂಡಾಮಂಡಲಗೊಂಡ ಯುವಕರು ಮಾತಿನ ಚಕಮಕಿಗೆ ಇಳಿದಿದ್ದಾರೆ. ಸ್ಥಳದಿಂದ ಹೋಗುವಂತೆ ಮಹಿಳೆ ತಿಳಿಸಿದ್ದು, ಈ ವೇಳೆ ಯುವಕರು ಮರದ ಹಲಗೆಯಿಂದ ತಲೆ ಮೇಲೆ ಬಡಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕೂಡಲೇ ಮಹಿಳೆಯನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಾಗಿದೆ.