ಗುವಾಹಟಿ: ಇಲ್ಲಿನ ಸರ್ಕಾರಿ ವಸತಿ ಶಾಲೆಯೊಂದರಲ್ಲಿ 2014ರಿಂದ 2022ರ ವರೆಗೆ 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಹಾಸ್ಟೆಲ್ ವಾರ್ಡನ್ ಯುಮ್ಕೆನ್ ಬಾಗ್ರಾಗೆ ಅರುಣಾಚಲ ಪ್ರದೇಶದ ವಿಶೇಷ ನ್ಯಾಯಾಲಯ ಗುರುವಾರ ಗಲ್ಲು ಶಿಕ್ಷೆ ವಿಧಿಸಿದೆ. ಅಲ್ಲದೇ ಮಕ್ಕಳು ದೂರು ನೀಡಿದರೂ ಅಪರಾಧವನ್ನು ವರದಿ ಮಾಡುವಲ್ಲಿ ವಿಫಲರಾದ ಮಾಜಿ ಮುಖ್ಯಶಿಕ್ಷಕ ಸಿಂಗ್ತುಂಗ್ ಯೋರ್ಪೆನ್ ಮತ್ತು ಹಿಂದಿ ಶಿಕ್ಷಕಿ ಮಾರ್ಬೊಮ್ ನ್ಗೊಮ್ದಿರ್ ಅವರಿಗೆ ಪೋಕ್ಸೊ ಕಾಯ್ದೆ ಅಡಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವಿಶೇಷ ನ್ಯಾಯಾಧೀಶರಾದ ಜಾವೆಪ್ಲು ಚೈ ತೀರ್ಪು ಪ್ರಕಟಿಸಿದ್ದಾರೆ. ಭಾರತೀಯ ದಂಡ ಸಂಹಿತೆ (IPC) ಮತ್ತು POCSO ಕಾಯ್ದೆ ಅಡಿಯಲ್ಲಿ ಮೂವರನ್ನು ದೋಷಿಗಳೆಂದು ಘೋಷಿಸಿದ್ದಾರೆ. ವಿದ್ಯಾರ್ಥಿಗಳು ದೂರು ನೀಡಿದರೂ ಸಹ ಶಾಲೆಯ ಖ್ಯಾತಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಮೌನವಾಗಿರುವಂತೆ ಕೇಳಿಕೊಂಡಿದ್ದರು ಎಂಬ ಕಾರಣಕ್ಕೆ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.
ಈ ಕುರಿತು ಮಾತನಾಡಿರುವ 21 ಮಕ್ಕಳ ಪರ ವಕೀಲ ಓಯಾಮ್ ಬಿಂಗೆಪ್, ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು ಸಂತೋಷವಾಗಿದೆ. ಇದು ದೇಶದಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ನೀಡಲಾದ ಮೊದಲ ಮರಣದಂಡನೆ ಪ್ರಕರಣವಾಗಿದೆ. ಇದರಲ್ಲಿ ಸಂತ್ರಸ್ತರು ಸತ್ತಿಲ್ಲ, ದೌರ್ಜನ್ಯ ಎಸಗಿದವರು ಸಾಯುತ್ತಾರೆ ಎಂದು ಸಹ ಉಲ್ಲೇಖಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಅದೇ ಶಾಲೆಯ ಇನ್ನೋರ್ವ ಶಿಕ್ಷಕ ತಾಜಂಗ್ ಯೋರ್ಪೆನ್ ಮತ್ತು ಹಾಸ್ಟೆಲ್ ವಾರ್ಡನ್ ಪರಿಚಯಸ್ತ ಡೇನಿಯಲ್ ಪರ್ಟಿನ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಕೇಸ್ ಬೆಳಕಿಗೆ ಬಂದಿದ್ದು ಯಾವಾಗ?
2022ರ ನವೆಂಬರ್ನಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ವಸತಿ ಶಾಲೆಯಲ್ಲಿ 12 ವರ್ಷದ ಅವಳಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕಾಗಿ ಆರೋಪಿ ಬಾಗ್ರಾ ವಿರುದ್ಧ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಬಳಿಕ ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತು. ಬಳಿಕ ಬ್ರಾಗ್ರಾ ಹಾಸ್ಟೆಲ್ ವಾರ್ಡನ್ ಆಗಿದ್ದ 2014-2022ರ ಅವಧಿಯಲ್ಲಿ 6 ರಿಂದ 14 ವರ್ಷ ವಯಸ್ಸಿನ 6 ಹುಡುಗರು ಸೇರಿದಂತೆ, 21 ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬುದನ್ನು ಪತ್ತೆ ಮಾಡಿತು.
ಕಳೆದ ಜುಲೈನಲ್ಲಿ ಈ ಸಂಬಂಧ ಚಾರ್ಜ್ಶೀಟ್ ಸಹ ಸಲ್ಲಿಸಲಾಗಿತ್ತು. ಈ ಮಾಹಿತಿ ಅನುಸಾರ, ವಾರ್ಡನ್ ಮಾದಕ ದ್ರವ್ಯ ಸೇವಿಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆ ನಡೆಸಿರುವ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದ. ಇದರಿಂದ 6 ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬುದನ್ನು ಎಸ್ಐಟಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ನಂತರ ಆರೋಪಿ ಬಾಗ್ರಾ ವಿರುದ್ಧ ಐಪಿಸಿಯ ಸೆಕ್ಷನ್ 328, 292 ಮತ್ತು 506 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 6, 10 ಮತ್ತು 12ರ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು. ಅಲ್ಲದೇ ಘಟನೆಯನ್ನು ವರದಿ ಮಾಡುವಲ್ಲಿ ವಿಫಲರಾದ ಮಹಿಳಾ ಶಿಕ್ಷಕಿ ನ್ಗೊಮ್ದಿರ್ಗೆ ಐಪಿಸಿ ಸೆಕ್ಷನ್ 506, ಪೋಕ್ಸೊ ಕಾಯ್ದೆಯ ಸೆಕ್ಷನ್ 17 ಮತ್ತು 21 (1)ರ ಅಡಿ ಶಿಕ್ಷೆ ವಿಧಿಸಲಾಗಿದೆ. ಇನ್ನೂ ಹಲ್ಲೆ ನಡೆಸಿದ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕನಾಗಿದ್ದ ಯೋರ್ಪೆನ್ಗೆ ಐಪಿಸಿ ಸೆಕ್ಷನ್ 17, 21 (2), ಶಿಕ್ಷೆ ವಿಧಿಸಲಾಗಿದೆ.