ಮಲಯಾಳಂ ಸಿನಿಮಾ ರಂಗದಲ್ಲಿ ಹೇಮಾ ಸಮಿತಿ ವರದಿ ಬಂದ ಬಳಿಕ ಒಂದೊಂದೇ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬರುತ್ತಿದೆ.
ಇದೀಗ ಆಂಧ್ರಪ್ರದೇಶದ ರಾಜಕಾರಣಿಯೊಬ್ಬರ ಮೇಲೆ ಮುಂಬೈ ನಟಿಯೊಬ್ಬರು ಮಾಡಿರುವ ಲೈಂಗಿಕ ಹಾಗೂ ಮಾನಸಿಕ ಹಿಂಸೆಯ ಆರೋಪ ರಾಜಕೀಯ ಹಾಗೂ ತೆಲುಗು ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿದೆ.
ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಆಡಳಿತವಿದ್ದ ವೈಸಿಪಿ ಪಕ್ಷದ ಪ್ರಮುಖ ಮುಖಂಡನೊಬ್ಬ ಮುಂಬೈ ಮೂಲದ ನಟಿ, ಮಾಡೆಲ್ ಜೊತೆಗೆ ವೈದ್ಯೆ ಸಹ ಆಗಿರುವ ಒಬ್ಬ ಯುವತಿಗೆ ಕೊಡಬಾರದ ಹಿಂಸೆ ಕೊಟ್ಟು, ಆಕೆಯನ್ನು, ಆಕೆಯ ಕುಟುಂಬವನ್ನು ಅಪಹರಿಸಿ ಚಿತ್ರಹಿಂಸೆ ಮಾಡಿರುವ ವಿಷಯ ಇದೀಗ ಬಹಿರಂಗವಾಗಿದೆ. ಈ ಅಮಾನುಷ ಘಟನೆಯಲ್ಲಿ ಕೆಲ ಐಪಿಎಸ್ ಅಧಿಕಾರಿಗಳು ಸಹ ಭಾಗಿಯಾಗಿರುವುದು ಕೂಡ ಬೆಳಕಿಗೆ ಬಂದಿದೆ.
ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುಕ್ಕಲ ವಿದ್ಯಾ ಸಾಗರ್ ಎಂಬ ವೈಸಿಪಿ ಮುಖಂಡ ಗುಜರಾತ್ ಮೂಲದ ಕಾದಂಬರಿ ಜೇಟ್ವಾನಿ ಹಾಗೂ ಅವರ ಕುಟುಂಬವನ್ನು ಅಪಹರಿಸಿ ಕೂಡಿಹಾಕಿ ನಾನಾ ರೀತಿಯ ಚಿತ್ರಹಿಂಸೆ ನೀಡಿದ್ದಾನೆ. ನಟಿ ಹಾಗೂ ಆಕೆಯ ಕುಟುಂಬದ ಮೇಲೆ ಸುಳ್ಳು ಕೇಸು ದಾಖಲಿಸಿ, ಸುಮಾರು ಒಂದೂವರೆ ತಿಂಗಳ ಕಾಲ ನಟಿ ಹಾಗೂ ಆಕೆಯ ಕುಟುಂಬ ಜೈಲಿನಲ್ಲಿ ಕಾಲ ಕಳೆಯುವಂತೆ ಮಾಡಲಾಗಿದೆ. ಈಗ ಆಂಧ್ರದಲ್ಲಿ ಸರ್ಕಾರ ಬದಲಾದ ಬಳಿಕ ನಟಿ, ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದು, ಕುಕ್ಕಲ ವಿದ್ಯಾ ಸಾಗರ್ ನ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ವೈದ್ಯೆಯೂ ಆಗಿರುವ ಕಾದಂಬರಿ ಜೇಟ್ವಾನಿ ವಿರುದ್ಧ ಕುಕ್ಕಲ ವಿದ್ಯಾಸಾಗರ್, ಫೆಬ್ರವರಿ 2 ರಂದು ಇಬ್ರಾಹಿಂ ಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಾದಂಬರಿ, ತನ್ನನ್ನು ಟ್ರ್ಯಾಪ್ ಮಾಡಿ, ಈಗ ನನ್ನಿಂದ ಕೋಟ್ಯಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ದೂರು ಆಧರಿಸಿ ನಟಿ ಕಾದಂಬರಿ ಹಾಗೂ ಅವರ ತಂದೆ, ತಾಯಿಯನ್ನು ಮುಂಬೈಗೆ ಹೋಗಿ ಪೊಲೀಸರು ಬಂಧಿಸಿದ್ದರು. ಸುಮಾರು ಒಂದೂವರೆ ತಿಂಗಳ ಕಾದಂಬರಿ ಹಾಗೂ ಅವರ ಕುಟುಂಬದವರೆಲ್ಲರೂ ಜೈಲಿನಲ್ಲಿ ಕಾಲ ಕಳೆದರು. ಜಾಮೀನಿನ ಮೇಲೆ ಹೊರಗೆ ಬಂದ ಬಳಿಕ ಎಲ್ಲರನ್ನೂ ಅಪಹರಣ ಮಾಡಿ ಕೊಂಡಪಲ್ಲಿಯ ಸರ್ಕಾರಿ ಗೆಸ್ಟ್ ಹೌಸ್ ಒಂದರಲ್ಲಿ ಕೂಡಿಹಾಕಿ ನಾನಾ ಹಿಂಸೆಗಳನ್ನು ಕೊಡಲಾಯ್ತಂತೆ. ಆ ವೇಳೆ ನಟಿ ಕಾದಂಬರಿಯ ತಂದೆಯ ಮೇಲೆ ಆದ ಹಲ್ಲೆಯಿಂದ ಅವರಿಗೆ ಕಿವಿ ಕೇಳಿಸದಂತಾಗಿದೆ. ಈ ವಿಷಯವನ್ನೆಲ್ಲ ನಟಿ ಮಾಧ್ಯಮದ ಮುಂದೆ ಇದೀಗ ಹೇಳಿಕೊಂಡಿದ್ದಾರೆ.
ಕೊಂಡಪಲ್ಲಿಯ ಸರ್ಕಾರಿ ಗೆಸ್ಟ್ ಹೌಸ್ನಲ್ಲಿ ಹಲವು ಪೊಲೀಸರು ಒಟ್ಟಾಗಿ ತಮ್ಮ ಮೇಲೆ ದೌರ್ಜನ್ಯ ಮಾಡಿದ್ದಾಗಿ, ಅತ್ಯಾಚಾರ ಯತ್ನ ಮಾಡಿರುವುದಾಗಿಯೂ ನಟಿ ಹೇಳಿಕೊಂಡಿದ್ದಾರೆ. ಅಲ್ಲದೆ ವೈಸಿಪಿ ಮುಖಂಡ ಕುಕ್ಕಲ ವಿದ್ಯಾಸಾಗರ್ ತನ್ನ ಜಮೀನು, ಮನೆಯ ನಕಲಿ ದಾಖಲೆ ಸೃಷ್ಟಿಸಿಕೊಂಡು ಮೋಸ ಮಾಡಲು ಸಹ ಯತ್ನಿಸಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಮೂವರು ಐಪಿಎಸ್ ಹಾಗೂ ಐಎಎಸ್ ಅಧಿಕಾರಿ ಸಹ ಶಾಮೀಲಾಗಿರುವ ಬಗ್ಗೆ ವಿಷಯ ಬಹಿರಂಗವಾಗಿದೆ.
ಅಂದಹಾಗೆ ನಟಿ ಕಾದಂಬರಿ ಅವರದ್ದು ವೈದ್ಯಕೀಯ ಹಿನ್ನೆಲೆಯ ಕುಟುಂಬವಾಗಿದ್ದು, ಕಾದಂಬರಿಯ ಅಜ್ಜ ಗುಜರಾತ್ನ ಜನಪ್ರಿಯ ವೈದ್ಯರು. ಅವರು ನಿವೃತ್ತರಾದಾಗ ಆಗ ಗುಜರಾತ್ನ ಸಿಎಂ ಆಗಿದ್ದ ನರೇಂದ್ರ ಮೋದಿ ಖುದ್ದಾಗಿ ಕಾದಂಬರಿಯ ತಾತನವರಿಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದರು. ಕಾದಂಬರಿಯ ತಂದೆ, ಸಹೋದರ ಸಹ ವೈದ್ಯರೇ. ಮಾತ್ರವಲ್ಲದೆ ಕಾದಂಬರಿ ಸಹ ವೈದ್ಯೆ ಆಗಿದ್ದರು. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಜರ್ನಲ್ಗಳನ್ನು ಸಹ ಪ್ರಕಟಿಸಿದ್ದಾರೆ.