ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪ ಪ್ರಕರಣದಲ್ಲಿ ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಇಂದು ಸ್ಥಳ ಮಹಜರ್ ಗಾಗಿ ಹಾಸನಕ್ಕೆ ಕರೆದೊಯ್ದಿದೆ. ಬಾಡಿ ವಾರಂಟ್ ಪಡೆದ ಎಸ್ಐಟಿ ಅಧಿಕಾರಿಗಳು ಆತನನ್ನು ಸ್ಥಳ ಮಹಜರ್ ಮಾಡಲು ಮತ್ತೊಮ್ಮೆ ಹಾಸನಕ್ಕೆ ಕರೆದುಕೊಂಡು ಹೋಗಿದ್ದಾರೆ.
ಹೊಳೆ ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ರೇಪ್ ಕೇಸ್ ಆರೋಪ ಸಂಬಂಧ ಪ್ರಜ್ವಲ್ನನ್ನು ಎಸ್ಐಟಿ ಅಧಿಕಾರಿಗಳು ಹಾಸನದ ನಿವಾಸದಲ್ಲಿ ಸ್ಥಳದ ಮಹಜರ್ ಮಾಡುತ್ತಿದ್ದಾರೆ. ಹಾಸನದಲ್ಲಿರುವ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಹೆಚ್ಚಿನ ತಪಾಸಣೆ ಮುಂದುವರೆಸಿದ್ದಾರೆಂದು ತಿಳಿದು ಬಂದಿದೆ.
ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಕಳೆದ ಸೋಮವಾರಕ್ಕೆ ಅಂತ್ಯವಾಗಿತ್ತು. ಹೀಗಾಗಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣಗೆ 42ನೇ ACMM ಕೋರ್ಟ್ ಜೂ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.