ವಾಷಿಂಗ್ಟನ್: ಡೆಲ್ಟಾ ಏರ್ಲೈನ್ಸ್ ವಿಮಾನದಲ್ಲಿ ಪಾನಮತ್ತನಾಗಿದ್ದ ಪ್ರಯಾಣಿಕನೊಬ್ಬ (Delta Passenger), ಹರಿಹರೆಯದ ಹುಡುಗಿ ಮತ್ತು ಆಕೆಯ ತಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವೆಂದು ಪರಿಗಣಿಸಿರುವ ನಾಗರಿಕ ವಿಮಾನಯಾನ ಸಂಸ್ಥೆಯು ಏರ್ಲೈನ್ಸ್ಗೆ (Delta Air Lines) 2 ದಶಲಕ್ಷ ಡಾಲರ್ (16.45 ಕೋಟಿ ರೂ.) ದಂಡ ವಿಧಿಸಿದೆ. ಜೊತೆಗೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸೂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ಜುಲೈ 26 ರಂದು ನಡೆದ ಘಟನೆ ಸಂಬಂಧ ತಾಯಿ-ಮಗಳನ್ನ ವಿಚಾರಣೆಗೆ ಕರೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತರು ಪ್ರಯಾಣಿಸಿದ ವಿಮಾನವು ನ್ಯೂಯಾರ್ಕ್ನ JFK ವಿಮಾನ ನಿಲ್ದಾಣದಿಂದ (FK Airport) ಗ್ರೀಸ್ನ ಅಥೆನ್ಸ್ಗೆ ಹೊರಟಿತ್ತು. ಸುಮಾರು 9 ಗಂಟೆಗಳ ಪ್ರಯಾಣ ಮಾಡಬೇಕಿತ್ತು. ಈ ವೇಳೆ ಸಂತ್ರಸ್ತರು ಸಿಬ್ಬಂದಿ ಸಹಾಯ ಕೋರಿದರೂ ಅದನ್ನು ನಿರ್ಲಕ್ಷಿಸಲಾಯಿತು.
ಮೊದಲೇ ಪಾನಮತ್ತನಾಗಿದ್ದ ವ್ಯಕ್ತಿಗೆ ಇನ್ನಷ್ಟು ಮದ್ಯ ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ನ್ಯೂಯಾರ್ಕ್ನ ಈಸ್ಟರ್ನ್ ಜಿಲ್ಲೆಯಲ್ಲಿ ಕೇಸ್ ದಾಖಲಾಗಿತ್ತು. ಪಾನಮತ್ತ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಿದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸದೇ ಆತನನ್ನ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.