ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ಲೈಂಗಿಕ ಆರೋಪಗಳು ಕೇಳಿ ಬರ್ತಿದೆ. ಇದೀಗ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಸಿನಿಮಾ ನಿರ್ಮಾಪಕ ರಂಜಿತ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರು ಕೊಚ್ಚಿ ನಗರ ಪೊಲೀಸ್ ಕಮಿಷನರ್ಗೆ ಚಲನಚಿತ್ರ ನಿರ್ಮಾಪಕರ ವಿರುದ್ಧ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ. 2009ರಲ್ಲಿ ‘ಪಾಲೇರಿ ಮಾಣಿಕ್ಯಂ’ ಸಿನಿಮಾದಲ್ಲಿ ನಟಿಸುವಂತೆ ನಟಿಯನ್ನು ಆಹ್ವಾನಿಸಿದ ನಂತರ ರಂಜಿತ್ ಅವರು ಲೈಂಗಿಕ ಉದ್ದೇಶದಿಂದ ನಟಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಪೊಲೀಸರಿಗೆ ಇಮೇಲ್ ಮೂಲಕ ಕಳುಹಿಸಿರುವ ದೂರಿನಲ್ಲಿ ನಟಿ ಆರೋಪಿಸಿದ್ದಾರೆ.
ಕೊಚ್ಚಿ ಪೊಲೀಸ್ ಕಮಿಷನರ್ ಎಸ್ ಶ್ಯಾಮಸುಂದರ್ ಪ್ರಕಾರ, ಐಪಿಸಿ ಸೆಕ್ಷನ್ 354 (ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲದಿಂದ ಆಕೆಯ ಘನತೆಗೆ ಹಾನಿಗೊಳಿಸುವ ಉದ್ದೇಶದಿಂದ) ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವರದಿ ಆಗಿದೆ.
ರಂಜಿತ್ ವರ್ಷಗಳ ಹಿಂದೆ ಸ್ಕ್ರಿಪ್ಟ್ ಕುರಿತು ಚರ್ಚಿಸುವಾಗ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಶ್ರೀಲೇಖಾ ಮಿತ್ರ ಆರೋಪಿಸಿದ್ದಾರೆ. “ಸಂಬಂಧಿಸಿದ ವ್ಯಕ್ತಿ (ರಂಜಿತ್) ಮಲಯಾಳಂ ಚಿತ್ರರಂಗದಲ್ಲಿ ಖ್ಯಾತನಾಮರು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ. ಮುಂಬರುವ ಚಲನಚಿತ್ರ ಯೋಜನೆ ಕುರಿತು ಚರ್ಚಿಸಲು ನಾನು ಅವರ ಮನೆಗೆ ಹೋಗಿದ್ದೆ. ಅಲ್ಲಿ ಅವರ ನಡವಳಿಕೆ ನನಗೆ ಇಷ್ಟವಾಗಲಿಲ್ಲ. ನಾವು ಸ್ಕ್ರಿಪ್ಟ್ ಬಗ್ಗೆ ಚರ್ಚಿಸುತ್ತಿರುವಾಗ ಅವರು ಅನುಚಿತವಾಗಿ ವರ್ತಿಸಿದರು ಎಂದು ಶ್ರೀಲೇಖಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆ ನಂತರ ನಾನು ಆ ಪ್ರಾಜೆಕ್ಟ್ ನಲ್ಲಿ ಭಾಗಿಯಾಗಲು ನಿರಾಕರಿಸಿ ಕೋಲ್ಕತ್ತಾಗೆ ಮರಳಿದೆ ಎಂದು ನಟಿ ಹೇಳಿದ್ದಾರೆ.
ರಂಜಿತ್ ಚಿತ್ರರಂಗದ ಇತರ ನಟಿಯರೊಂದಿಗೆ ಅದೇ ರೀತಿ ನಡೆಸಿಕೊಂಡಿದ್ದಾರೆಯೇ ಎಂದು ನನಗೆ ಗೊತ್ತಿಲ್ಲ. ಅಂತಹ ಪರಿಸ್ಥಿತಿ ಎದುರಾದರೆ ಅದನ್ನು ಬಹಿರಂಗಪಡಿಸುವುಗು ಅವರಿಗೆ ಬಿಟ್ಟದ್ದು. ಬಹುಶಃ ನಿರ್ದೇಶಕರ ಶಕ್ತಿ ಮತ್ತು ಪ್ರಭಾವವು ಇತರರು ಮಾತನಾಡದಿರುವಂತೆ ತಡೆಯುತ್ತಿದೆ ಎಂದು ನಟಿ ಶ್ರೀಲೇಖಾ ಹೇಳಿದ್ದಾರೆ.ಆದರೆ ನಟಿಯ ಆರೋಪಗಳನ್ನು ತಿರಸ್ಕರಿಸಿದ ರಂಜಿತ್, ಪ್ರಕರಣದಲ್ಲಿ ನಾನೇ “ನಿಜವಾದ ಸಂತ್ರಸ್ತ” ಎಂದಿದ್ದಾರೆ.
ಆರೋಪದ ಹಿನ್ನೆಲೆಯಲ್ಲಿ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಿಯೋ ಕ್ಲಿಪ್ನಲ್ಲಿ, ರಂಜಿತ್ ಅವರು ಅಧ್ಯಕ್ಷರಾಗಿ ಮುಂದುವರಿಯಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.