ಮುಂಬಯಿ: ಪತ್ನಿಯ ಲೈಂಗಿಕ ಬಯಕೆಯನ್ನು ಪೂರ್ಣಗೊಳಿಸಲು ಪತಿ ಅಸಮರ್ಥನಿರುವ ಹಿನ್ನೆಲೆಯಲ್ಲಿ ಯುವ ದಂಪತಿಯ ಮದುವೆಯನ್ನು ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠವು ರದ್ದುಗೊಳಿಸಿದೆ. ಯುವ ದಂಪತಿ 2023ರ ಮಾರ್ಚ್ನಲ್ಲಿ ಮದುವೆಯಾಗಿದ್ದರು.
ಮದುವೆಯಾದ 17 ದಿನದಲ್ಲಿಯೇ ಪತ್ನಿಯು ತನ್ನ ಲೈಂಗಿಕ ಬಯಕೆ ಈಡೇರಿಸಲು ಪತಿ ಅಸಮಪರ್ಕನಾಗಿದ್ದು, ಮದುವೆಯನ್ನು ರದ್ದುಗೊಳಿಸುವಂತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಳು. ಇದಾದ ನಂತರ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಎಸ್.ಜಿ. ಚಾಪಲ್ಗಾಂವ್ಕರ್ ಅವರಿದ್ದ ವಿಭಾಗೀಯ ಪೀಠವು, ”ಮಾನಸಿಕವಾಗಿ, ಭಾವನಾತ್ಮಕವಾಗಿ ಇಲ್ಲವೇ ದೈಹಿಕವಾಗಿ ಪರಸ್ಪರ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗದ ಸಮಸ್ಯೆಯಿಂದ ಬಳಲುವ ಯುವ ದಂಪತಿಗಳಿಗೆ ಸಹಾಯ ಮಾಡಲು ಇದು ಸೂಕ್ತ ಪ್ರಕರಣವಾಗಿದೆ,” ಎಂದು ಹೇಳಿದೆ.