2023ರಲ್ಲಿ ತೆರೆಕಂಡ ಪಠಾಣ್ ಸಿನಿಮಾದ ಮೂಲಕ ನಟ ಶಾರುಖ್ ಖಾನ್ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಕಿಂಗ್ ಖಾನ್ ದೊಡ್ಡ ಪರದೆಯಲ್ಲಿ ದರ್ಶನ ನೀಡುವುದು 2025ರಲ್ಲಿ. ಅವರ ಮುಂದಿನ ಸಿನಿಮಾ ಹೆಸರು ‘ಕಿಂಗ್’ ಎಂದು ಹೇಳಲಾಗುತ್ತಿದ್ದು, ಈ ಸಿನಿಮಾದಲ್ಲಿ ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ನಟಿಸಲಿದ್ದಾರೆ. ಈ ಚಿತ್ರದ ಬಜೆಟ್ ಬರೋಬ್ಬರಿ 200 ಕೋಟಿ ರೂಪಾಯಿ ಎನ್ನಲಾಗುತ್ತಿದೆ.
ಈ ಹಿಂದೆ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಖಾನ್ ನಟಿಸಿದ್ದರು. ಅದು ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈಗ ‘ಕಿಂಗ್’ ಚಿತ್ರದಲ್ಲಿ ಶಾರುಖ್ ಜೊತೆ ನಟಿಸುವ ಮೂಲಕ ಸುಹಾನಾ ಬೆಳ್ಳಿಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಮಗಳ ಮೊದಲ ಚಿತ್ರ ಅದ್ಧೂರಿಯಾಗಿರಬೇಕು ಎಂಬ ಕಾರಣಕ್ಕೆ 200 ಕೋಟಿ ರೂ. ಬಜೆಟ್ನಲ್ಲಿ ಹಣ ಸುರಿಯಲು ಶಾರುಖ್ ಖಾನ್ ಮುಂದಾಗಿದ್ದಾರೆ.
ಈ ಸಿನಿಮಾಗೆ ಸುಜಯ್ ಘೋಶ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ. ಕಲಾವಿದರ ಆಯ್ಕೆ ಕೂಡ ತೆರೆಮರೆಯಲ್ಲಿ ನಡೆಯುತ್ತಿದ್ದು ಸದ್ಯದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ. ವಿದೇಶದ ಸ್ಟಂಟ್ ಮಾಸ್ಟರ್ಗಳನ್ನು ಕರೆದುಕೊಂಡು ಬಂದು ಆ್ಯಕ್ಷನ್ ದೃಶ್ಯಗಳನ್ನು ಚಿತ್ರಿಸಲಾಗುವುದು. ಶಾರುಖ್ ಖಾನ್ ಅಭಿಮಾನಿಗಳು ಈ ಮೊದಲು ಕಂಡು ಕೇಳಿರದ ಆ್ಯಕ್ಷನ್ ಸಿನಿಮಾ ಇದಾಗಬೇಕು ಎಂದು ‘ಕಿಂಗ್’ ತಂಡದವರು ಶ್ರಮಿಸುತ್ತಿದ್ದಾರೆ. ಶಾರುಖ್ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದ್ದು ಚಿತ್ರ ಆರಂಭಕ್ಕೂ ಮುನ್ನವೇ ನಿರೀಕ್ಷೆ ಮೂಡಿಸಿದೆ.