ಬೆಂಗಳೂರು: ಬಟ್ಟೆ ಕ್ಲೀನ್ ಇಲ್ಲವೆಂದು ವ್ಯಕ್ತಿಯನ್ನು ಒಳಗೆ ಬಿಡದ ಮೆಟ್ರೋ (Namma Metro) ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ಎಂಡಿ ಮಹೇಶ್ವರನ್ ಹೇಳಿದ್ದಾರೆ
ರೈತನಿಗೆ ಬಟ್ಟೆ ಕೊಳೆಯಾಗಿದೆ ಎಂದು ಮೆಟ್ರೋದೊಳಗೆ ಪ್ರವೇಶ ನಿರಾಕರಣೆ ಮಾಡಿರುವ ಘಟನೆಗೆ ಕಾರಣವಾದ ಸೆಕ್ಯುರಿಟಿ ಸೂಪರ್ ವೈಸರ್ ಅಮಾನತು ಮಾಡಿ ಮೆಟ್ರೋ ಎಂಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ನಾವು ಸಂಪೂರ್ಣ ತನಿಖೆ ಮಾಡ್ತೀವಿ ಎಂದು ಮಾಹಿತಿ ನೀಡಿದ್ದಾರೆ.
ಈ ಘಟನೆ ತಡವಾಗಿ ಬೆಳಕಿಗೆ ಬಂತು. ಇದು ಯಾವುದೇ ಕಾರಣಕ್ಕೂ ಕ್ಷಮಿಸುವಂತದ್ದಲ್ಲ. ಕೂಡಲೇ ಘಟನೆಗೆ ಕಾರಣರಾದವರನ್ನ ಟರ್ಮಿನೇಟ್ ಮಾಡಲಾಗಿದೆ. ಘಟನೆಯನ್ನ ಬಿಎಂಆರ್ಸಿಎಲ್ ಖಂಡಿಸುತ್ತಿದೆ ಎಂದು ಬಿಎಂಆರ್ ಸಿಎಲ್ ಪಿಆರ್ ಒ ಯಶವಂತ ಚೌಹಾಣ್ ತಿಳಿಸಿದ್ದಾರೆ.
ಏನಿದು ಘಟನೆ..?: ಬಟ್ಟೆ ಸ್ವಚ್ಛವಾಗಿಲ್ಲ ಎಂದು ವ್ಯಕ್ತಿಯೊಬ್ಬರಿಗೆ ಮೆಟ್ರೋ ಸಿಬ್ಬಂದಿ ನಿಲ್ದಾಣದ ಒಳಗೆ ಬಿಡಲು ನಿರಾಕರಿಸಿದ್ದಾರೆ. ಈ ಘಟನೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಬಿಎಂಆರ್ ಸಿಎಲ್ ಸಿಬ್ಬಂದಿಯ ಅತಿರೇಕದ ವರ್ತನೆಯ ವೀಡಿಯೋ ಪ್ರಯಾಣಿಕರ ಮೊಬೈಲ್ನಲ್ಲಿ ಸೆರೆಯಾಗಿದೆ. ಬಳಿಕ ಸಹಪ್ರಯಾಣಿಕರು ಸಿಬ್ಬಂದಿ ಬಗ್ಗೆ ತಲೆಕೆಡಿಸಿಕೊಳ್ಳದೆ, ವ್ಯಕ್ತಿಯನ್ನು ಮೆಟ್ರೋದಲ್ಲಿ ಕರೆದೊಯ್ದಿದ್ದಾರೆ. ಅಲ್ಲದೇ ಮೆಟ್ರೋ ಸಿಬ್ಬಂದಿ ವಿರುದ್ಧ ಸಹಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.