ಮೈಸೂರು: ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸರ್ವ ರೀತಿಯಲ್ಲಿಯೂ ವಿಫಲರಾಗಿರುವ ನಳಿನ್ ಕುಮಾರ್ ಕಟೀಲ್ ರವರು, ಸಿದ್ದರಾಮಯ್ಯನವರ ನೇತೃತ್ವದ ಜನಪರ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್ ಕಿಡಿಕಾರಿದರು. ಬಿಜೆಪಿಯ ಹೀನಾಯ ಸೋಲಿಗೆ ಅವರ ಪಕ್ಷದ ನಾಯಕರೇ ನಳಿನ್ ರವರ ರಾಜೀನಾಮೆಗಾಗಿ ದಿನ ನಿತ್ಯವೂ ಬೇಡಿಕೆ ಮುಂದಿಡುತ್ತಿದ್ದಾರೆ.
ಇವರೊಬ್ಬ ಕೆಲಸಕ್ಕೆ ಬಾರದ ವ್ಯಕ್ತಿ ಎಂದೆಲ್ಲಾ ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಹೀಗಾಗಿ ನಳಿನ್ ತಮ್ಮ ಪಕ್ಷದೊಳಗಿನ ಜಗಳ ಬಗೆಹರಿಸಿಕೊಳ್ಳಲು, ಮತ್ತು ಪಕ್ಷದೊಳಗೆ ತಮ್ಮ ವ್ಯಕ್ತಿತ್ವದ ಘನತೆ ಉಳಿಸಿಕೊಳ್ಳಲು ಆದ್ಯತೆ ನೀಡಬೇಕಾದ ತುರ್ತು ಅಗತ್ಯವಿದೆ. ಬಿಜೆಪಿಯು ದುರಾಡಳಿತ, ಭ್ರಷ್ಟಾಚಾರ, ಕೋಮುವಾದಿ ನಿಲುವುಗಳಿಂದ ಬೇಸತ್ತು ಜನತೆ ಕಾಂಗ್ರೆಸ್ ಪಕ್ಷಕ್ಕೆ ಆಶಿರ್ವಾದ ಮಾಡಿ, ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದಾರೆ ಎನ್ನುವುದನ್ನು ಅನಗತ್ಯವಾಗಿ ಟೀಕಿಸುತ್ತಿರುವ ನಳಿನ್ ಹಾಗೂ ಬಿಜೆಪಿಯ ಇನ್ನಿತರ ನಾಯಕರು ಮನಗಾಣಬೇಕಿದೆ ಎಂದು ಹೆಚ್.ಎ ವೆಂಕಟೇಶ್ ಕುಟುಕಿದರು