ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಆಗಮಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಸೀನಾ ಅವರ ಮಗ ಮತ್ತು ಮಾಜಿ ಅಧಿಕೃತ ಸಲಹೆಗಾರ ಸಜೀದ್ ವಾಜೆದ್ ಜಾಯ್ ಅವರು ಶೇಖ್ ಹಸೀನಾ ಮತ್ತೆಂದು ರಾಜಕೀಯಕ್ಕೆ ಮರಳುವುದಿಲ್ಲ. ಅವರ ಸುರಕ್ಷತೆ ದೃಷ್ಟಿಯಿಂದ ಕುಟುಂಬದ ಸಲಹೆ ಪರಿಗಣಿಸಿ ಅವರು ದೇಶ ತೊರೆದಿದ್ದಾರೆ ಎಂದಿದ್ದಾರೆ.
ತಮ್ಮ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಹಸೀನಾ, ಸೇನಾ ವಿಮಾನದಲ್ಲಿ ಭಾರತದ ಮೂಲಕ ಲಂಡನ್ಗೆ ತೆರಳಿದ್ದಾರೆ.
ಈ ಕುರಿತಂತೆ ಬಿಬಿಸಿಯ ನ್ಯೂಸ್ ಅವರ್ ಸಂದರ್ಶನದಲ್ಲಿ ಮಾತನಾಡಿರುವ ಜಾಯ್, ನಮ್ಮ ತಾಯಿ ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರವೇ ಅವರು ರಾಜೀನಾಮೆಗೆ ನಿರ್ಧರಿಸಿದ್ದರು. ಕುಟುಂಬದ ಸಲಹೆ ಮೇರೆಗೆ ಅವರ ಸುರಕ್ಷತೆ ದೃಷ್ಟಿಯಿಂದ ದೇಶ ತೊರೆದಿದ್ದಾರೆ ಎಂದು ಮಗ ಹೇಳಿದ್ದಾರೆ.
‘ದೇಶಕ್ಕಾಗಿ ಬಹಳ ಶ್ರಮಪಟ್ಟು ದುಡಿದ ಅವರ ವಿರುದ್ಧವೇ ಜನ ತಿರುಗಿಬಿದ್ದಿದ್ದರಿಂದ ತೀವ್ರ ಹತಾಶರಾಗಿದ್ದೇವೆ’ಎಂದು ಅವರು ಹೇಳಿದ್ದಾರೆ.
’15 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ನಮ್ಮ ತಾಯಿ, ಅಧಿಕಾರಕ್ಕೆ ಬರುವ ಮುನ್ನ ದೇಶವನ್ನು ವಿಫಲ ರಾಷ್ಟ್ರ, ಬಡ ರಾಷ್ಟ್ರ ಎಂದು ಪರಿಗಣಿಸಲಾಗುತ್ತಿತ್ತು. ಈಗ ಬಾಂಗ್ಲಾದೇಶವನ್ನು ಏಷ್ಯಾದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಪರಿಗಣಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದಂಗೆ ಅವರನ್ನು ಹತಾಶರನ್ನಾಗಿಸಿದೆ’ಎಂದು ಜಾಯ್ ತಿಳಿಸಿದ್ದಾರೆ.
ಹಸೀನಾ ರಾಜೀನಾಮೆಗೆ ಒತ್ತಾಯಿಸಿ ಆರಂಭವಾಗಿದ್ದ ಅಸಹಕಾರ ಚಳವಳಿ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಮತ್ತು ಅವಾಮಿ ಲೀಗ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ 106ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.