ಬೆಂಗಳೂರು: ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮೊದಲೇ ಪ್ಲ್ಯಾನ್ ಮಾಡಿದ್ದರು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಪದ್ಮನಾಭ ನಗರದಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿ ಎಲ್ಲವನ್ನೂ ಅನುಭವಿಸಿ ಹೋಗಿರೋದು ಆಶ್ಚರ್ಯ ಉಂಟುಮಾಡಿದೆ. ಮುಖ್ಯಮಂತ್ರಿ ಆಗಬೇಕು ಎನ್ನುವ ಕೊರಗು ಅವರಿಗೆ ಇದ್ದಿದ್ದರೆ ಕಾಂಗ್ರೆಸ್ಗೆ ಹೋಗಿದ್ದಾರೆ ಎನ್ನಬಹುದು.
ಆದರೆ ಅವರಿಗೆ ಈ ರೀತಿಯಾದ ಕೊರಗು ಇರಲಿಲ್ಲ. ಅವರ ಕುಟುಂಬಕ್ಕೆ ಟಿಕೆಟ್ ಕೊಡುತ್ತೇವೆ ಎಂದರೂ ಹೋಗಿದ್ದಾರೆ. ಅವರ ಏರಿಯಾದಲ್ಲಿ ಏನೋ ಕೆಲಸ ಪೆಂಡಿಂಗ್ ಇದೆ ಎಂದಾಗಿದ್ದರೆ ಅವರ ಮಗ ಅಥವಾ ಶ್ರೀಮತಿ ಕೈಯಲ್ಲಿಯೇ ಮಾಡಿಸಬಹುದಿತ್ತು ಕಾಂಗ್ರೆಸ್ಗೆ ಹೋಗಿ ದುಡುಕಿನ ನಿರ್ಧಾರ ಮಾಡಿದ್ದಾರೆ. ಇದು ಒಳ್ಳೆಯದಲ್ಲ. ಅಧಿಕಾರವನ್ನು ಕೊಟ್ಟಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಹೋಗಿರುವುದು ಬಹಳ ನೋವಿನ ಸಂಗತಿ ಎಂದು ಜಗದೀಶ್ ಶೆಟ್ಟರ್ ವಿರುದ್ಧ ಸಚಿವ ಆರ್.ಅಶೋಕ್ ಕೆಂಡಾಮಂಡಲರಾಗಿದ್ದಾರೆ.