ಬೆಂಗಳೂರು: ಶಾಸಕ ಸ್ಥಾನ ರಾಜೀನಾಮೆ ನೀಡಿ ಬಿಜೆಪಿ ತೊರೆಯಲು ಮುಂದಾಗಿರುವ ಜಗದೀಶ್ ಶೆಟ್ಟರ್ (Jagadish Shetter) ಅವರನ್ನು ಕಾಂಗ್ರೆಸ್ನತ್ತ ಸೆಳೆಯಲು ʼಕೈʼ ನಾಯಕರು ಯತ್ನಿಸಿದ್ದಾರೆ. ಭಾನುವಾರ ರಾತ್ರಿ ನಗರದ ಸ್ಕೈ ಗಾರ್ಡನ್ ಅಪಾರ್ಟ್ಮೆಂಟ್ನಲ್ಲಿ ಶೆಟ್ಟರ್ ಭೇಟಿಯಾದ ಕಾಂಗ್ರೆಸ್ (Congress) ನಾಯಕರು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅಲ್ಲದೇ ಹುಬ್ಬಳ್ಳಿ-ಧಾರವಾಡ ಕೇಂದ್ರದಿಂದ ಸ್ಪರ್ಧೆ ಮಾಡುವಂತೆ ಆಫರ್ ಕೂಡ ನೀಡಿದ್ದಾರೆ.
ರಿಚ್ಮಂಡ್ ಟೌನ್ನ ಎಸ್ಎಸ್ ಮಲ್ಲಿಕಾರ್ಜುನ್ ಫ್ಲ್ಯಾಟ್ನಲ್ಲಿ ಶೆಟ್ಟರ್ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ 2 ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆಸಿದರು. ಈ ವೇಳೆ ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಜಮೀರ್ ಅಹ್ಮದ್ ಕೂಡ ಇದ್ದರು.
ಮೊದಲು ಜಗದೀಶ್ ಶೆಟ್ಟರ್ ಷರತ್ತುಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸುರ್ಜೇವಾಲ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಿಂದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ ನೀಡಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮಹತ್ವದ ಪಾತ್ರದ ಬಗ್ಗೆ ಸಹ ಚರ್ಚೆ ನಡೆಸಿದರು. ಆ ಮೂಲಕ ಮುಂದೆ ಎಂಪಿ ಟಿಕೆಟ್ಗೆ ಸ್ಪರ್ಧಿಸುವಂತೆ ಸಹ ಆಫರ್ ನೀಡಿದರು ಎಂದು ಮೂಲಗಳು ತಿಳಿಸಿವೆ.
ನ್ಯಾಯೋಚಿತವಾಗಿ ಕುಟುಂಬ ಸದಸ್ಯರ ರೀತಿ ನಡೆಸಿಕೊಳ್ಳಲಾಗುತ್ತೆ. ಗೌರವಯುತವಾಗಿ ಸ್ಥಾನಮಾನಗಳನ್ನ ಸಹ ನೀಡುವುದಾಗಿ ಶೆಟ್ಟರ್ಗೆ ಸುರ್ಜೇವಾಲ ಭರವಸೆ ನೀಡಿದರು. ನಾಳೆ (ಸೋಮವಾರ) ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಮಾಡಲಾಗುವುದು ಎಂದು ಕೂಡ ಹೇಳಿದರು. ಶೆಟ್ಟರ್ ಜೊತೆಗಿನ ಮಾತುಕತೆ ವಿವರವನ್ನ ರಾಹುಲ್ ಗಾಂಧಿಗೆ ಸುರ್ಜೇವಾಲ ತಿಳಿಸಿದ್ದಾರೆ. ಸೋಮವಾರ ಕೆಪಿಸಿಸಿ ಹೊಸ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸಹ ಸೂಚನೆ ನೀಡಲಾಗಿದೆ.