ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರ್ಪಡೆ ಆ ಭಾಗದಲ್ಲಿ ಕಾಂಗ್ರೆಸ್ ಬಲವನ್ನ ಇನ್ನಷ್ಟು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಸೇರಬೇಕು ಎಂಬ ಆಶಯದೊಂದಿಗೆ ಪಕ್ಷದ ಸದಸ್ಯತ್ವವನ್ನು ಇಂದು ಸ್ವೀಕರಿಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಂಸದ ಅಮರ್ ಸಿಂಗ್ ಪಾಟೀಲ್ ಪಕ್ಷ ಸೇರುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಪಕ್ಷದ ನೀತಿ ಹಾಗೂ ಐಡಿಯಾಲಜಿಗಳ ಅರಿವು ಶೆಟ್ಟರ್ಗೆ ಇದೆ.
ಅವರು ಬಿಜೆಪಿಯಲ್ಲಿ ಇದ್ದು ಅಲ್ಲಿನ ಕಾರ್ಯನಿರ್ವಹಣೆ ಹೇಗೆ ನಡೆಸಿದ್ದಾರೆ ಎನ್ನುವುದು ನಿಮಗೆ ಗೊತ್ತು. ಇಂದು ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವ ಸಲುವಾಗಿ ಕಾಂಗ್ರೆಸ್ನ ಐಡಿಯಾಲಜಿಯನ್ನ ಒಪ್ಪಿ ಸೇರ್ಪಡೆ ಆಗುತ್ತಿದ್ದಾರೆ. ತಮ್ಮ ಶಕ್ತಿಯನ್ನು ಬಳಸಿ ಬಿಜೆಪಿಯ ಏಳಿಗೆಗೆ ಶ್ರಮಿಸಿದರು. ಇಂದು ಅವರು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಅವರು ಮಾತ್ರವಲ್ಲ ಆ ಭಾಗದಲ್ಲಿನ ಕಾಂಗ್ರೆಸ್ ಶಕ್ತಿಯನ್ನು ಸಹ ಹೆಚ್ಚಿಸಿದ್ದಾರೆ. ಶೆಟ್ಟರ್ ತಂದೆ ಸಹ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಮಯ ರಾಜಕಾರಣ ಮಾಡಿದ್ದರು. ಅತಿ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಸಹ ಹೊಂದಿದ್ದಾರೆ ಎಂದು ಹೇಳಿದರು.ನಾವು ಸರ್ಕಾರದಲ್ಲಿದ್ದಾಗ ಅವರು ಪ್ರತಿಪಕ್ಷದಲ್ಲಿ ಇರುತ್ತಿದ್ದರು.
ಅವರು ಅಧಿಕಾರದಲ್ಲಿದ್ದಾಗ ನಾವು ಪ್ರತಿಪಕ್ಷದಲ್ಲಿ ಇರುತ್ತಿದ್ದೆವು. ನಮ್ಮ ನಡುವೆ ಸಿಕ್ಕಾಟ ಇದ್ದೇ ಇರುತ್ತಿತ್ತು. ಆದರೆ ಶೆಟ್ಟರ್ ಒಬ್ಬ ಸಜ್ಜನ ರಾಜಕಾರಣಿ ಆಗಿದ್ದು ಅವಕಾಶ ಮಾಡಿಕೊಟ್ಟಿರಲಿಲ್ಲ. ರಾಹುಲ್ ಗಾಂಧಿ ರಾಜ್ಯದಲ್ಲಿ 150 ಸ್ಥಾನ ಗಳಿಸಬೇಕು ಎಂಬ ಗುರಿ ನೀಡಿದ್ದಾರೆ ಇದೀಗ ಜಗದೀಶ್ ಶೆಟ್ಟರ್ ಸೇರ್ಪಡೆ ನಂತರ ನಮಗೆ ಅದು ಸುಲಭ ಎಂಬ ಅರಿವು ಹಾಗೂ ಖಚಿತತೆ ಮೂಡಿದೆ. ಧಾರವಾಡ ಕೇಂದ್ರದಲ್ಲಿ ಅವರು ಗೆದ್ದೇ ಗೆಲ್ಲುತ್ತಾರೆ ಇದರ ಜೊತೆಗೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಕ್ಷೇತ್ರಗಳನ್ನು ಸಹ ಗೆಲ್ಲಿಸಿಕೊಂಡು ಬರುತ್ತಾರೆ ಎಂಬ ವಿಶ್ವಾಸ ಇದೆ. ತಮ್ಮ ಸ್ವಾಭಿಮಾನಕ್ಕೆ ಉಂಟಾದ ಧಕ್ಕೆಯನ್ನು ಸಹಿಸಿಕೊಳ್ಳಲಾಗದೆ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ನ ಬಲವನ್ನ ಇನ್ನಷ್ಟು ಹೆಚ್ಚಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು