ಶಿವಮೊಗ್ಗ: ಶಿವಶರಣರ ನಾಡು, ಹಲವು ಐತಿಹಾಸಿಕ ತಾಣಗಳ ಬೀಡು ಶಿಕಾರಿಪುರ ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠಿತ ಕ್ಷೇತ್ರವೆನಿಸಿಕೊಂಡಿದೆ. ಪಕ್ಕದ ಸೊರಬ ಕ್ಷೇತ್ರ ಮಾಜಿ ಸಿಎಂ ಎಸ್.ಬಂಗಾರಪ್ಪ ಕುಟುಂಬದ ಹಿಡಿತದಲ್ಲೆಉಳಿದಿರುವಂತೆ ಶಿಕಾರಿಪುರ ಸಹ 40 ವರ್ಷಗಳಲ್ಲಿಒಮ್ಮೆ ಹೊರತಾಗಿ ನಿರಂತರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬದ ಹಿಡಿತದಲ್ಲೇ ಉಳಿದಿದೆ. ರಾಜ್ಯದಲ್ಲಿಅತಿಹೆಚ್ಚು ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕ್ಷೇತ್ರದ ಮತದಾರರು ಯಡಿಯೂರಪ್ಪರಿಗೆ ನೀಡಿದರು.
ಒಂದು ಕಾಲದಲ್ಲಿ ರಾಜ್ಯದ ಭತ್ತದ ಕಣಜ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅತ್ಯುತ್ತಮ ಗುಣಮಟ್ಟದ ಭತ್ತ ಬೆಳೆಯುತ್ತಿದ್ದ ಕಾರಣ ಶಿಕಾರಿಪುರದ ಅಕ್ಕಿಗೆ ರಾಜ್ಯದೆಲ್ಲೆಡೆ ಭಾರಿ ಬೇಡಿಕೆ ಇತ್ತು. ಆದರೆ, ರೈತರು ಬೆಲೆಯ ಕಾರಣಕ್ಕೆ ಅಡಕೆ ಬೆನ್ನತ್ತಿ ಹೋಗಿದ್ದರಿಂದ ಹಚ್ಚ ಹಸಿರಾಗಿ ಕಾಣುತ್ತಿದ್ದ ಗದ್ದೆ ಬಯಲನ್ನು ಅಲ್ಲಲ್ಲಿಅಡಕೆ ತೋಟಗಳು ಆವರಿಸಿಕೊಂಡಿವೆ. ಮೆಕ್ಕೆಜೋಳ ಮತ್ತು ಶುಂಠಿ ಬೆಳೆ ಸಹ ಅಧಿಕವಾಗಿದೆ.
ಕ್ಷೇತ್ರ ವ್ಯಾಪ್ತಿ- ಹೆಗ್ಗಳಿಕೆ
ಕ್ಷೇತ್ರದ ವ್ಯಾಪ್ತಿ ಶಿಕಾರಿಪುರ ತಾಲೂಕಿಗಷ್ಟೆ ಸೀಮಿತಗೊಂಡಿದೆ. ಕ್ಷೇತ್ರದಲ್ಲಿ ವೀರಶೈವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಬಂಜಾರ, ವಾಲ್ಮೀಕಿ, ಕುರುಬರು, ಅಲ್ಪಸಂಖ್ಯಾತರು ಆನಂತರದ ಸ್ಥಾನದಲ್ಲಿಇದ್ದಾರೆ. ಸಾಗರ ಮತ್ತು ಸೊರಬ ಕ್ಷೇತ್ರಗಳ ಗಡಿಯಲ್ಲಿ ಈಡಿಗರು, ಅಂಜನಾಪುರ ಹೋಬಳಿಯಲ್ಲಿಒಕ್ಕಲಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಸ್ವಾತಂತ್ರ್ಯ ನಂತರದ ಮೊದಲ ಚುನಾವಣೆಯಲ್ಲಿ ಸೊರಬದೊಂದಿಗೆ ದ್ವಿ ಸದಸ್ಯ ಕ್ಷೇತ್ರವಾಗಿತ್ತು. 1962ರಲ್ಲಿಮೀಸಲು ಕ್ಷೇತ್ರವಾಗಿ ಸ್ವತಂತ್ರ ಅಸ್ತಿತ್ವ ಪಡೆದುಕೊಂಡಿತ್ತು. 1983ರ ಚುನಾವಣೆಯಲ್ಲಿಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆ ಕಂಡಿತು. ಉದ್ಯೋಗ ನಿಮಿತ್ತ ಅಕ್ಕಿಗಿರಣಿ ಕಾರ್ಮಿಕನಾಗಿ ಬಂದು ಪಕ್ಷ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಯಡಿಯೂರಪ್ಪ ಅವರು ಮೊದಲ ಬಾರಿಗೆ 1983ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಹಾಲಿ ಸಚಿವ ಕೆ.ಯಂಕಟಪ್ಪ ವಿರುದ್ಧ ಜಯ ಗಳಿಸಿದರು. ಅದಕ್ಕೂ ಮೊದಲು ಕೆ.ಯಂಟಕಪ್ಪ ಅವರು ಎರಡು ಬಾರಿ ಜಯಗಳಿಸಿದ್ದರು.
ಸೋಲಿನ ಆಘಾತ
ಮೊದಲ ಪ್ರಯತ್ನದಲ್ಲೆ ವಿಧಾನಸೌಧದ ಮೆಟ್ಟಿಲು ತುಳಿದ ಯಡಿಯೂರಪ್ಪ ಅವರು ಮತ್ತೆಂದೂ ಅವರು ತಿರುಗಿ ನೋಡಲಿಲ್ಲ. 9 ಸ್ಪರ್ಧೆಯಲ್ಲಿ 8 ಬಾರಿ ಜಯ ಗಳಿಸಿದ ಹೆಗ್ಗಳಿಕೆ ಅವರದ್ದು. 1999ರಲ್ಲಿ ಬಂಗಾರಪ್ಪ ಅವರು ಹೊಸ ಮುಖ ಬಿ.ಎನ್.ಮಹಾಲಿಂಗಪ್ಪರನ್ನು ಕಣಕ್ಕಿಳಿಸಿ ಮೊದಲ ಬಾರಿಗೆ ಯಡಿಯೂರಪ್ಪರಿಗೆ ಸೋಲಿನ ಆಘಾತ ನೀಡಿದರು. 2008ರಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಯಡಿಯೂರಪ್ಪರ ವಿರುದ್ಧ ಮತ್ತೊಮ್ಮೆ ಸ್ವತಃ ಬಂಗಾರಪ್ಪ ಅವರೆ ತೊಡೆತಟ್ಟಿ ಚುನಾವಣೆಗೆ ಸ್ಪರ್ಧಿಸಿದರೂ ಕ್ಷೇತ್ರ ಮತದಾರರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಟ್ಟುಕೊಡಲಿಲ್ಲ.
ಕ್ಷೇತ್ರ ಮಾಜಿ ಶಾಸಕರು
1962 ವೀರಪ್ಪ ಕಾಂಗ್ರೆಸ್
1967 ಜಿ.ಬಸವಣ್ಯಪ್ಪ ಎಸ್ಎಸ್ಪಿ
1972 ಕೆ.ಯಂಟಕಪ್ಪ ಕಾಂಗ್ರೆಸ್
1978 ಕೆ.ಯಂಟಕಪ್ಪ ಕಾಂಗ್ರೆಸ್
1983 ಬಿ.ಎಸ್.ಯಡಿಯೂರಪ್ಪ ಬಿಜೆಪಿ
1985 ಬಿ.ಎಸ್.ಯಡಿಯೂರಪ್ಪ ಬಿಜೆಪಿ
1989 ಬಿ.ಎಸ್.ಯಡಿಯೂರಪ್ಪ ಬಿಜೆಪಿ
1994 ಬಿ.ಎಸ್.ಯಡಿಯೂರಪ್ಪ ಬಿಜೆಪಿ
1999 ಬಿ.ಎನ್.ಮಹಾಲಿಂಗಪ್ಪ ಕಾಂಗ್ರೆಸ್
2004 ಬಿ.ಎಸ್.ಯಡಿಯೂರಪ್ಪ ಬಿಜೆಪಿ
2008 ಬಿ.ಎಸ್.ಯಡಿಯೂರಪ್ಪ ಬಿಜೆಪಿ
2013 ಬಿ.ಎಸ್.ಯಡಿಯೂರಪ್ಪ ಕೆಜೆಪಿ
2014 ಬಿ.ವೈ.ರಾಘವೇಂದ್ರ ಬಿಜೆಪಿ
2018ರ ಚುನಾವಣೆ ಫಲಿತಾಂಶ
ವಿಜೇತರು: ಬಿ.ಎಸ್.ಯಡಿಯೂರಪ್ಪ(ಬಿಜೆಪಿ)
ಪಡೆತ ಮತ: 86,983
ಗೆಲುವಿನ ಅಂತರ: 35,397
ಸಮೀಪದ ಪ್ರತಿಸ್ಪರ್ಧಿ: ಗೋಣಿ ಮಾಲತೇಶ್(ಕಾಂಗ್ರೆಸ್): 51,586
ಎಚ್.ಟಿ.ಬಳಿಗಾರ್(ಜೆಡಿಎಸ್): 13,191
ಒಟ್ಟು ಮತದಾರರು: 1,97,443
ಪುರುಷರು: 99,129
ಮಹಿಳೆಯರು: 98311