ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ, ನಟಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ಎಂಡೊಮೆಟ್ರಿಯೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ವಿಡಿಯೋ ಹಂಚಿಕೊಂಡ ನಟಿ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಮಿತಾ ಶೆಟ್ಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಆಸ್ಪತ್ರೆಯಲ್ಲಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋ ಮತ್ತು ಕ್ಯಾಪ್ಷನ್ನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕಾರಣವನ್ನು ತಿಳಿಸಿದ್ದಾರೆ. ಜೊತೆಗೆ ಹೊರಗಿರುವ ಎಲ್ಲಾ ಮಹಿಳೆಯರಿಗೂ ಈ ಬಗ್ಗೆ ಜಾಗೃತರಾಗಿರುವಂತೆ, ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ.
ಆಸ್ಪತ್ರೆಯಿಂದ ತಮ್ಮ ವಿಡಿಯೋ ಶೇರ್ ಮಾಡಿಕೊಂಡ ಶಮಿತಾ ಶೆಟ್ಟಿ, ”ಸುಮಾರು ಶೇ. 40ರಷ್ಟು ಮಹಿಳೆಯರು ಎಂಡೊಮೆಟ್ರಿಯೊಸಿಸ್ನಿಂದ ಬಳಲುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ. ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆ ಬಗ್ಗೆ ತಿಳಿದಿಲ್ಲ. ನನ್ನ ನೋವಿನ ಮೂಲ ಕಾರಣವನ್ನು ಕಂಡುಕೊಳ್ಳುವವರೆಗೂ ಕೆಲಸ ನಿಲ್ಲಿಸದ ನನ್ನ ವೈದ್ಯರಾದ ಡಾ. ನೀತಾ ವಾರ್ತಿ ಮತ್ತು ಡಾ. ಸುನೀತಾ ಬ್ಯಾನರ್ಜಿ ಇಬ್ಬರಿಗೂ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಸದ್ಯ ಶಸ್ತ್ರಚಿಕಿತ್ಸೆಯಿಂದ ರೋಗಮುಕ್ತಳಾಗಿದ್ದೇನೆ. ಉತ್ತಮ ಆರೋಗ್ಯಕ್ಕಾಗಿ, ನೋವು ಮುಕ್ತ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.