ರಾಜ್ಯದ ಶಿರೂರು ಗುಡ್ಡ ಕುಸಿತ ದುರಂತ ಭಯಾನಕವಾಗಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ದುರ್ಘಟನೆಯಲ್ಲಿ 8 ಮಂದಿಯ ಶವ ಸಿಕ್ಕಿದ್ದು, ಇನ್ನೂ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಂಕೋಲಾದ ಈ ಗುಡ್ಡ ಕುಸಿತ ದುರಂತದ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಕ್ಷರಶಃ ಗುಡುಗಿದ್ದಾರೆ.
ಭೀಕರ ಶಿರೂರು ಗುಡ್ಡ ಕುಸಿತ ಸಂಭವಿಸಿ 6 ದಿನ ಕಳೆದರೂ ರಾಜ್ಯ ಸರ್ಕಾರದಿಂದ ಯಾರೊಬ್ಬರು ಭೇಟಿ ನೀಡಿರಲಿಲ್ಲ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ ಕೊಟ್ಟ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಡಿಕೆ ಭೇಟಿ ಕೊಟ್ಟ ಬಳಿಕವಷ್ಟೇ ಸಿಎಂ, ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಇದು ಕರ್ನಾಟಕ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ದೇವೇಗೌಡರು ಹೇಳಿದ್ದಾರೆ.
ದುರಂತದಲ್ಲಿ ಜನರು ಸತ್ತಿದ್ದಾರೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ರಾಜ್ಯಸಭೆಯಲ್ಲಿ ದೇವೇಗೌಡರು ಪ್ರಶ್ನಿಸಿದರು. ಆಗ ದೇವೇಗೌಡರ ಮಾತಿಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಮಾತಿಗೆ ಅಡ್ಡಿಪಡಿಸಿದರು. ಕಾಂಗ್ರೆಸ್ ಸದಸ್ಯರ ಅಡ್ಡಿ ನಡುವೆಯೂ ಮಾತು ಮುಂದುವರಿಸಿದ ದೇವೇಗೌಡರು, ಎನ್ಡಿಆರ್ಎಫ್ ಸೇರಿದಂತೆ ರಕ್ಷಣಾ ತಂಡ ಕಳಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದರು.
ನಾನು ಯಾವುದೇ ಅಸಂಸದೀಯ ಪದ ಬಳಸಿಲ್ಲ. ನಾನು ಸತ್ಯವನ್ನು ಮಾತ್ರ ಹೇಳಿದ್ದೇನೆ. ನೀವು ನಿಮ್ಮ ನಾಯಕರಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿಯೇ ಮಾಹಿತಿ ಕೇಳಿ. ಕಾಂಗ್ರೆಸ್ ಸದಸ್ಯರಿಂದ ನಾನು ಕಲಿಯಬೇಕಾಗಿಲ್ಲ ಎಂದು ಗುಡುಗಿದ ದೇವೇಗೌಡರು ಎದ್ದು ನಿಂತು ತೀವ್ರ ವಾಗ್ದಾಳಿ ನಡೆಸಿದ್ದಾರೆ.