ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲಿ ಡ್ರೋನ್ ಕಾರ್ಯಾಚರಣೆ ಆರಂಭವಾಗಿದೆ. ಅಡ್ವಾನ್ಸ್ಡ್ ಡ್ರೋನ್ ಬೆಸ್ಟ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ಡ್ ಬರ್ಡ್ ಆಬ್ಜೆಕ್ಟ್ ಡಿಟೆಕ್ಟರ್ ಎಂಬ ಡ್ರೋನ್ ಕಾರ್ಯಾಚರಣೆ ನಡೆಸುತ್ತಿದೆ. ಅಷ್ಟಕ್ಕೂ ಇದ್ರ ವಿಶೇಷತೆಯೇನು ಗೊತ್ತಾ..?
ಇದು ನಾಪತ್ತೆಯಾಗಿರೋ ಶವಗಳನ್ನು ಹೇಗೆ ಗುರುತಿಸಬಲ್ಲದು..? ಇಲ್ಲಿದೆ ಫುಲ್ ಡೀಟೇಲ್ಸ್..!
ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಬರೋಬ್ಬರಿ ಹತ್ತು ಜನರನ್ನು ಬಲಿ ಪಡೆದಿರೋ ಈ ಘಟನೆ ನಡೆದು ಇವತ್ತಿಗೆ ಹತ್ತು ದಿನವಾಗಿದೆ. ಘಟನೆಯಲ್ಲಿ ನಾಪತ್ತೆಯಾದವರ ಶೋಧ ಕಾರ್ಯ ನಿರಂತರ ಮಳೆಯ ನಡುವೆಯೂ ಚಾಳ್ತಿಯಲ್ಲಿದೆ. ಇದೀಗ ಕೆರಳದ ಅರ್ಜುನಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅದಕ್ಕಾಗಿ ವಿಶೇಷ ಸಾಮರ್ಥ್ಯದ ಡ್ರೋನ್ ಬಳಸಲಾಗುತ್ತಿದೆ..
ಗುರುವಾರ ಮಧ್ಯಾಹ್ನ ಪ್ರಾರಂಭವಾದ ಡ್ರೋನ್ ಕಾರ್ಯಾಚರಣೆ ಬಹುತೇಕ ನಾಪತ್ತೆಯಾಗಿರುವ ಮೃತದೇಹವನ್ನು ಶೋಧ ಮಾಡುವ ಸಾಮರ್ಥ್ಯ ಹೊಂದಿದೆ. ನೌಕಾದಳ ಹಾಗೂ ಭಾರತೀಯ ಭೂಸೇನೆ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ತೊಡಗಿದೆ. ದೆಹಲಿಯಿಂದ ರೈಲಿನ ಮೂಲಕ ಡ್ರೋನ್ ತರಿಸಿಕೊಳ್ಳಲಾಗಿದೆ. ಇದು 2.4 ಕಿ.ಮೀ ಎತ್ತರದಲ್ಲಿ ಹಾರಾಡಬಲ್ಲ, ಮಣ್ಣಿನಲ್ಲಿ 20 ಮೀಟರ್ ಮತ್ತು ನೀರಿನಲ್ಲಿ 70 ಮೀಟರ್ ಆಳದವರೆಗೂ ಪರೀಕ್ಷೆ ನಡೆಸಬಲ್ಲ ಡ್ರೋಣ್ ಆಗಿದೆ. ಹಿಮ, ನೀರು, ಬಂಡೆ ಮತ್ತು ಮರುಭೂಮಿಗಳಲ್ಲೂ ಪತ್ತೆ ಕಾರ್ಯಕ್ಕೆ ಈ ಡ್ರೋನ್ ಬಳಕೆಯಾಗುತ್ತದೆ.
ಇನ್ನು, ಈ ಸಾಧನವನ್ನು ಇಬ್ಬರು ತರಬೇತಿ ಪಡೆದ ಸೈನಿಕರು ನಿರ್ವಹಿಸುತ್ತಾರೆ. ಭಾರೀ ಪ್ರವಾಹಗಳು ಮತ್ತು ಹಿಮಕುಸಿತಗಳು ಸಂಭವಿಸಿದ ಸ್ಥಳಗಳಲ್ಲಿ ಇದನ್ನು ಮುಖ್ಯವಾಗಿ ಬಳಸಲಾಗುತ್ತದೆ. ನೆಲದಡಿಯಲ್ಲಿ ಮಾನವ ಉಪಸ್ಥಿತಿಯನ್ನು ಕೂಡ ಇದರಿಂದ ಕಂಡುಹಿಡಿಯಬಹುದು. ಮೃತದೇಹ ಪತ್ತೆ ಕಾರ್ಯಾಚರಣೆಗೂ ಸಹಕಾರಿಯಾಗಲಿದೆ. ಭೂಮಿ ಆಳದ ಗಣಿ ಪತ್ತೆಯನ್ನೂ ಮಾಡಬಹುದು.
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಈ ಡ್ರೋಣನ್ನು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ, ಭಾರೀ ಮಳೆ ಮತ್ತು ಗಂಟೆಗೆ 40 ಕಿ.ಮೀ.ವರೆಗಿನ ಗಾಳಿಯ ವೇಗದಲ್ಲೂ ಬಳಸಬಹುದು ಅನ್ನೊ ಮಾಹಿತಿ ಇದೆ. ಒಟ್ನಲ್ಲಿ, ಅಂಕೊಲಾ ಶೊರೂರಿ ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿರೋ ಲಾರಿ ಚಾಲಕ ಅರ್ಜುನ ಹಾಗೂ ಆತನ ಲಾರಿಯ ಕುರುಹು ಪತ್ತೆ ಮಾಡಲು ಹರಸಾಹಸ ಪಡಲಾಗುತ್ತಿದೆ. ನಾಳೆಯಷ್ಟೊತ್ತಿಗೆ ಕಾರ್ಯಾಚರಣೆ ಒಂದು ಹಂತಕ್ಕೆ ಬರಬಹುದಾದ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ.