ಬೆಂಗಳೂರು: ಟೀಮ್ ಇಂಡಿಯಾಗೆ 3 ಸ್ವರೂಪದಲ್ಲೂ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟಿರುವ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ , ಹಲವು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಐಪಿಎಲ್ ಟೂರ್ನಿ ವೇಳೆ ಎಂಎಸ್ ಡಿ ಧೋನಿ ಕ್ಯಾಪ್ಟನ್ಸಿ ಅಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರಿಂದ ಮತ್ತು ಅವರು ನೀಡಿದ ಸಲಹೆ ತಮ್ಮ ಕ್ರಿಕೆಟ್ ಜೀವನ ಹೇಗೆ ಬದಲಾಯಿಸಿದೆ ಎಂಬುದನ್ನು ಮುಂಬೈ ಆಲ್ ರೌಂಡರ್ ಶಿವಂ ದುಬೇ ಬಹಿರಂಗಪಡಿಸಿದ್ದಾರೆ.
ದೇಶಿ ಟೂರ್ನಿಯ ಪ್ರತಿಷ್ಠಿತ ದೇವಧರ್ ಟ್ರೋಫಿಯಲ್ಲಿ ಪಶ್ಚಿಮ ವಲಯವನ್ನು ಮುನ್ನಡೆಸುತ್ತಿರುವ ಶಿವಂ ದುಬೇ, ಉತ್ತರ ವಲಯ ವಿರುದ್ಧ ತಮ್ಮ ಆಲ್ ರೌಂಡ್ ಪ್ರದರ್ಶನದಿಂದ ಸೋಲಿನ ದವಡೆಗೆ ಸಿಲುಕಿದ್ದ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ಸು ಕಂಡಿದ್ದರು.
ಪಂದ್ಯದಲ್ಲಿ ಉತ್ತರ ವಲಯ ನೀಡಿದ್ದ 260 ಬೃಹತ್ ಮೊತ್ತ ಹಿಂಬಾಲಿಸಿದ ಪಶ್ಚಿಮ ವಲಯ 122 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ 5ನೇ ವಿಕೆಟ್ ಗೆ ಕೇತನ್ ಪಟೇಲ್ ರೊಂದಿಗೆ ಜೊತೆಗೂಡಿದ ಶಿವಂ ದುಬೇ, ಸಿಡಿಲಬ್ಬರದ ಬ್ಯಾಟ್ ಮಾಡಿ 78 ಎಸೆತಗಳಲ್ಲಿ 83* ರನ್ ಸಿಡಿಸಿ 138 ರನ್ ಜೊತೆಯಾಟ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಗೆಲುವಿಗೆ ಧೋನಿ ನೀಡಿದ ಸಲಹೆಯೇ ಕಾರಣ ಎಂದು ಶಿವಂ ದುಬೇ ಹೇಳಿದ್ದಾರೆ.