2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ನಟ ಕಿಚ್ಚ ಸುದೀಪ್ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲ ನೀಡಲು ನಿರ್ಧರಿಸಿದ್ದು ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುದೀಪ್ ಅವರ ಸಿನಿಮಾ, ಟಿ.ವಿ.ಶೋ ಹಾಗೂ ಜಾಹಿರಾತುಗಳ ಪ್ರದರ್ಶನಕ್ಕೆ ತಡೆ ಹಿಡಿಯಬೇಕೆಂದು ಶಿವಮೊಗ್ಗದ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಶಿವಮಮೊಗ್ಗ ಜಿಲ್ಲೆಯ ವಕೀಲ ಕೆ.ಪಿ ಶ್ರೀಪಾಲ ಎಂಬುವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ “ಕನ್ನಡದ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಅವರ ನಟನೆಯ ಯಾವುದೇ ಚಲನಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು ಟಿ.ವಿಗಳಲ್ಲಿ ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ ಟಿ.ವಿ ಶೋಗಳು ಪ್ರಸಾರವಾಗದಂತೆ ಮತ್ತು ನಟಿಸಿರುವ ಜಾಹಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು’ ಎಂದು ತಿಳಿಸಿದ್ದಾರೆ.
ಸುದೀಪ್ ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರಮಾಡುತ್ತಿರುವುದನ್ನು ಅವರೆ ಘೋಷಣೆ ಮಾಡಿದ್ದರಿಂದ ಅವರ ನಟನೆಯ ಚಲನಚಿತ್ರಗಳು, ಟಿ.ವಿ ಶೋಗಳು ಹಾಗೂ ಜಾಹಿರಾತುಗಳು ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ತಕ್ಷಣದಿಂದ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳುವಂತೆ ವಕೀಲ ಕೆ.ಪಿ ಶ್ರೀಪಾಲ ಒತ್ತಾಯಿಸಿದ್ದಾರೆ.