‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಭಾನುವಾರದ ಎಪಿಸೋಡ್ ನಲ್ಲಿ ಭಾರಿ ಡ್ರಾಮಾವೇ ನಡೆದಿತ್ತು. ಆಟ ಆರಂಭವಾಗಿ 50 ದಿನಗಳ ಬಳಿಕ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ಶೋಭಾ ಶೆಟ್ಟಿ ಆರಂಭದಲ್ಲಿ ಜೋರಾಗಿಯೇ ಘರ್ಜಿಸಿದ್ದರು. ಬಳಿಕ ಫುಲ್ ಸೈಲೆಂಟ್ ಆಗಿ ಕಣ್ಣೀರು ಹಾಕೋಕೆ ಶುರು ಮಾಡಿದರು. ಈ ವಾರ ಜನರು ಹಾಕಿದ ವೋಟ್ನಿಂದ ಸೇವ್ ಆಗಿದ್ದ ಶೋಭಾ ಶೆಟ್ಟಿ ಅವರು ಸುದೀಪ್ ಮುಂದೆ ಅಳಲು ಆರಂಭಿಸಿದ್ದರು. ತಾವು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿರುವುದಾಗಿ ತಿಳಿಸಿದರು. ಆದರೆ ಅವರಿಗೆ ಸುದೀಪ್ ಸಮಾಧಾನ ಮಾಡಿ, ಬುದ್ಧಿಮಾತು ಹೇಳಿದ ಬಳಿಕ ಮನಸ್ಸು ಬದಲಾಯಿಸಿದರು. ಆದರೆ ಕೊನೆಯಲ್ಲಿ ಇನ್ನೊಂದು ಡ್ರಾಮಾ ಆರಂಭಿಸಿದರು. ತಾವು ಹೊರಗೆ ಹೋಗಲೇಬೇಕು ಎಂದು ಶೋಭಾ ಶೆಟ್ಟಿ ಹಠ ಹಿಡಿದರು. ಆಗ ಸುದೀಪ್ ಕೋಪ ನೆತ್ತಿಗೇರಿತು.
ಭಾನುವಾರದ ಎಪಿಸೋಡ್ ಮುಗಿಯುವಾಗ ಸುದೀಪ್ ಫುಲ್ ಗರಂ ಆಗಿ ಮಾತನಾಡಿದ್ದರು. ‘ನೀವು ಈ ಮನೆಯಿಂದ ಕೂಡಲೇ ಹೊರಗೆ ಹೋಗಿ’ ಎಂದು ಶೋಭಾಗೆ ಸುದೀಪ್ ಆಜ್ಞೆ ಮಾಡಿದ್ದರು. ಆದರೆ ಶೋಭಾ ಎಲಿಮಿನೇಟ್ ಆದರೋ ಇಲ್ಲವೋ ಎಂಬುದು ಖಚಿತವಾಗಿರಲಿಲ್ಲ. ಸೋಮವಾರದ (ಡಿ.2) ಸಂಚಿಕೆಯಲ್ಲಿ ಆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಶೋಭಾ ಅವರು ಮುಖ್ಯ ದ್ವಾರದ ಬಳಿ ಬಂತು ನಿಂತುಕೊಂಡು ‘ಈಗ ಹೋಗಬೇಕು ಅಂತ ಅನಿಸುತ್ತಿಲ್ಲ’ ಎಂದು ಮತ್ತೆ ಹೊಸ ಡ್ರಾಮಾ ಶುರು ಮಾಡಲು ಮುಂದಾದರೂ ಕೂಡ ಬಿಗ್ ಬಾಸ್ ಮನಸ್ಸು ಕರಗಲಿಲ್ಲ. ಕಡೆಗೂ ಮುಖ್ಯದ್ವಾರ ಓಪನ್ ಆಯಿತು. ಶೋಭಾ ಹೊರಗೆ ಹೋಗಲೇಬೇಕಾಯಿತು.
ತೆಲುಗು ಬಿಗ್ ಬಾಸ್ ಶೋನಲ್ಲಿ ಶೋಭಾ ಶೆಟ್ಟಿ ಅವರು ಸಖತ್ ಸೌಂಡು ಮಾಡಿದ್ದರು. ತೆಲುಗು ಕಿರುತೆರೆಯಲ್ಲಿ ಅವರಿಗೆ ಸಿಕ್ಕಾಪಟ್ಟೆ ಹೆಸರು ಇದೆ. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತಾಯಿತು. ಸಿಕ್ಕ ಒಂದು ಒಳ್ಳೆಯ ಅವಕಾಶವನ್ನು ಹೀಗೆ ಅರ್ಧಕ್ಕೆ ಕೈ ಚೆಲ್ಲಿದ್ದಕ್ಕೆ ಸ್ವತಃ ಶೋಭಾ ಶೆಟ್ಟಿ ಜೊತೆಗೆ ಅವರ ಅಭಿಮಾನಿಗಳಿಗೂ ಬೇಸರವಾಗಿದೆ.