ಬೆಂಗಳೂರು: ಚುನಾವಣಾ ಆಯೋಗವು 223 ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕಾರ ಮಾಡಬೇಕು ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje)ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಶೋಭಕ್ಕ ನಿಮ್ಮ ಪಕ್ಷದವರಂತೆ ನಾವು 40 ಪರ್ಸೆಂಟ್ ಕಮಿಷನ್ ಪಡೆದಿಲ್ಲ.
ನಿಮ್ಮ ಕಮಿಷನ್ ಸರ್ಕಾರದ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್, ನೆಹರೂ ಓಲೇಕಾರ್, ಮಾಡಾಳ್ ವಿರೂಪಾಕ್ಷಪ್ಪ, ಎಚ್. ವಿಶ್ವನಾಥ್, ಗೂಳಿಹಟ್ಟಿ ಶೇಖರ್ ಅವರೇ ಸಾಕ್ಷಿ ನೀಡಿದ್ದಾರೆ’ ಎಂದರು. ನಾವು ಅರ್ಜಿ ಶುಲ್ಕ 5 ಸಾವಿರ ರು. ಹಾಗೂ ಪಕ್ಷದ ಕಟ್ಟಡಕ್ಕೆ ದೇಣಿಗೆಯಾಗಿ ಅಧಿಕೃತವಾಗಿ 2 ಲಕ್ಷ ರು. ಸಂಗ್ರಹಿಸಿದ್ದೇವೆ. ಮೊದಲು ನಿಮ್ಮ ಸರ್ಕಾರದಲ್ಲಿನ 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಿ ಎಂದು ತಿರುಗೇಟು ನೀಡಿದರು.